Connect with us

Cricket

ಪಾಂಡ್ಯಾ ಬ್ಯಾಟಿಂಗ್, ಬೌಲಿಂಗ್‍ಗೆ ಮಕಾಡೆ ಮಲಗಿದ ಆಸೀಸ್

Published

on

ಚೆನ್ನೈ: ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 26 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು. ಆಸೀಸ್ ಬ್ಯಾಟಿಂಗ್ ಆರಂಭಕ್ಕೂ ಮುನ್ನಾ ಭಾರೀ ಮಳೆ ಸುರಿದ ಪರಿಣಾಮ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ 21 ಓವರ್ ಗಳಲ್ಲಿ 164 ರನ್ ಗುರಿಯನ್ನು ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 21 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

ಆಸೀಸ್ ಪರ ಗ್ಲೇನ್ ಮ್ಯಾಕ್ಸ್ ವೆಲ್ ಸ್ಫೋಟಕ 39 ರನ್(18 ಎಸೆತ, 3 ಬೌಂಡರಿ, 4 ಸಿಕ್ಸರ್) ಸಿಡಿಸಿದರೆ ಜೇಮ್ಸ್ ಫಾಲ್ಕನರ್ ಔಟಾಗದೇ 32 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

ಭಾರತದ ಪರವಾಗಿ ಸ್ಪಿನ್ನರ್ ಚಹಲ್ 3 ವಿಕೆಟ್ ಕಬಳಿಸಿದರೆ, ಕಲದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 2 ವಿಕೆಟ್ ಪಡೆದರು. ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು. ಬ್ಯಾಟಿಂಗ್, ಬೌಲಿಂಗ್ ಉತ್ತಮವಾಗಿದ್ದರೂ ಟೀಂ ಇಂಡಿಯಾದ ಫೀಲ್ಡಿಂಗ್ ಉತ್ತಮವಿರಲಿಲ್ಲ. ಕೈಗೆ ಸಿಕ್ಕಿದ್ದ ಹಲವು ಸುಲಭದ ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದರು.

ಭಾರತದ ಭರ್ಜರಿ ಬ್ಯಾಟಿಂಗ್: 11 ರನ್ ಗಳಿಗೆ 3 ವಿಕೆಟ್ ಪತನಗೊಂಡು 87 ರನ್ ಗಳಿಗೆ 5 ಮಂದಿ ಟಾಪ್ ಬ್ಯಾಟ್ಸ್ ಮನ್ ಗಳು ಔಟಾದಾಗ ಭಾರತ ಶೀಘ್ರವೇ ಆಲೌಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಧೋನಿ, ಪಾಂಡ್ಯಾ, ಕೊನೆಯಲ್ಲಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಭರ್ಜರಿ ಆಟದಿಂದಾಗಿ ಭಾರತ ಆಸ್ಟ್ರೇಲಿಯಾಗೆ 282 ರನ್‍ಗಳ ಗುರಿಯನ್ನು ನೀಡಿತ್ತು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 3.3 ಓವರ್ ಗಳಲ್ಲಿ 11 ರನ್ ಗಳಿಸುವಷ್ಟರಲ್ಲೇ ರಹಾನೆ ವಿಕೆಟ್ ಕಳೆದುಕೊಂಡಿತ್ತು. ನಂತರ ಕೊಹ್ಲಿ ಮತ್ತು ಮನೀಷ್ ಪಾಂಡೆ ಶೂನ್ಯಕ್ಕೆ ಔಟಾದರು. ಇಲ್ಲಿಗೆ 5.3 ಮೂರು ಓವರ್ ಮುಕ್ತಾಯಗೊಂಡಿದ್ದರೂ ಭಾರತ ಗಳಿಸಿದ್ದು ಮಾತ್ರ ಅಷ್ಟೇ 11 ರನ್.

ನಂತರ ಬಂದ ಕೇದಾರ್ ಜಾಧವ್ ರೋಹಿತ್ ಶರ್ಮಾಗೆ ಸಾಥ್ ನೀಡಿದರು. ರೋಹಿತ್ ಶರ್ಮಾ 28 ರನ್ ಗಳಿಸಿದರೆ ಕೇದಾರ್ ಜಾಧವ್ 54 ಎಸೆತದಲ್ಲಿ 5 ಬೌಂಡರಿ ಸಿಡಿಸಿ 40 ರನ್ ಗಳಿಸಿ ಔಟಾದರು.

ಧೋನಿ ಪಾಂಡ್ಯಾ ಜುಗಲ್‍ಬಂದಿ: 21.3 ಓವರ್ ಗಳಲ್ಲಿ 87 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಹಾರ್ದಿಕ್ ಪಾಂಡ್ಯಾ ಆಗಮಿಸಿದರು. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಧೋನಿ ಪಾಂಡ್ಯಾ ಜೋಡಿ 36.2 ಓವರ್ ಗಳಲ್ಲಿ ಭಾರತ ರನ್ 150ರ ಗಡಿ ದಾಟಿಸಿತು. 48 ಎಸೆತಗಳಲ್ಲಿ ಅರ್ಧಶತಕ ಹೊಡೆದ ಪಾಂಡ್ಯಾ ಅಂತಿಮವಾಗಿ 66 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಿಡಿಸಿ 83 ರನ್‍ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾದರು. ಆ್ಯಡಮ್ ಜಂಪಾ ಎಸೆದ 37 ನೇ ಓವರ್ನ ಕೊನೆಯಲ್ಲಿ ಹ್ಯಾಟ್ರಿಕ್ ಸಿಕ್ಸ್ ಹೊಡೆದು ಮತ್ತೊಮ್ಮೆ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎನ್ನುವುದನ್ನು ಸಾಬೀತುಪಡಿಸಿದರು. ಒಟ್ಟಿನಲ್ಲಿ ಧೋನಿ ಮತ್ತು ಪಾಂಡ್ಯಾ 6ನೇ ವಿಕೆಟ್ ಗೆ 128 ಎಸೆತಗಳಲ್ಲಿ 118 ರನ್ ಹೊಡೆಯುವ ಮೂಲಕ ಭಾರತ 200 ರನ್‍ಗಳ ಗಡಿ ದಾಟಿತ್ತು.

ಧೋನಿ ಮತ್ತು ಭುವನೇಶ್ವರ್ ಕುಮಾರ್ 7ನೇ ವಿಕೆಟ್‍ಗೆ 72 ರನ್ ಪೇರಿಸಿದರು. 40.3 ಓವರ್ ಗಳಲ್ಲಿ 200 ರನ್ ಗಳಿಸಿದ್ದ ಭಾರತ ಕೊನೆಯ 9.3 ಓವರ್ ಗಳಲ್ಲಿ 81 ರನ್ ಗಳಿಸಿತು. ಧೋನಿ 79 ರನ್(88 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಯವರಾಗಿ ಔಟಾದರು. ಭುವನೇಶ್ವರ್ ಕುಮಾರ್ ಔಟಾಗದೇ 30 ರನ್(30 ಎಸೆತ, 5 ಬೌಂಡರಿ) ಗಳಿಸಿದರು.

ಆಸ್ಟ್ರೇಲಿಯಾದ ಪರ ನೇಥನ್ ಕೌಲ್ಟರ್ ನೈಲ್ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್ 2ವಿಕೆಟ್ ಪಡೆದರು. ಜೇಮ್ಸ್ ಫಾಲ್ಕೂನರ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು.

ಸ್ಫೋಟಕ 83 ರನ್ ಸಿಡಿಸಿ 2 ವಿಕೆಟ್ ಕಿತ್ತ ಹಾರ್ದಿಕ್ ಪಾಂಡ್ಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 


 


Click to comment

Leave a Reply

Your email address will not be published. Required fields are marked *

www.publictv.in