ಕುವೈತ್: ಅಮೆರಿಕ-ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಕುವೈತ್ ಮತ್ತು ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ (Iran) ಕ್ಷಿಪಣಿ, ಡ್ರೋನ್ ದಾಳಿ (Drone Attack) ನಡೆಸಿದೆ. ಆದರೆ ಇರಾನ್ ಹಾರಿಸಿದ ಕ್ಷಿಪಣಿ, ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಕುವೈತ್ ಏರ್‌ಪೋರ್ಟ್ (Kuwait Airport) ಮೇಲೆ ಇರಾನ್ ದಾಳಿಯಿಂದಾಗಿ ಓರ್ವ ಭಾರತೀಯ ಸಾವನ್ನಪ್ಪಿದ್ದಾನೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಕುವೈತ್ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿಯಿಂದಾಗಿ ಸಿಬ್ಬಂದಿ ಹಾಗೂ ಪ್ರಯಾಣಿಕರು ದೇರಿದಂತೆ ಕನಿಷ್ಠ 63 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿಗಳು ವಿಮಾನ ನಿಲ್ದಾಣದ ಕಟ್ಟಡಗಳು ಹಾಗೂ ರಾಜತಾಂತ್ರಿಕ ಕಚೇರಿಗೆ ಅಪ್ಪಳಿಸಿದ್ದು, ಭಾರೀ ಹಾನಿಯುಂಟಾಗಿದೆ.
ಇರಾನ್ ದಾಳಿ ಬೆನ್ನಲ್ಲೇ ಕುವೈತ್ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸದ್ಯ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತೆ ಸೇವೆಯನ್ನು ಆರಂಭಿಸಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಇತ್ತ ಅಮೆರಿಕ ಇರಾನ್‌ನ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಹೇರಿದ್ದು, ನಿಯಮ ಉಲ್ಲಂಘಿಸಿ ಇರಾನ್ ಪ್ರವೇಶಿಸಲು ಯತ್ನಿಸುತ್ತಿದ್ದ ವಾಣಿಜ್ಯ ತೈಲ ಟ್ಯಾಂಕರ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಮಾರ್ಗ ಬದಲಿಸುವಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಇರಾನ್‌ನತ್ತ ಹೊರಟಿದ್ದ ಕಾರಣ ದಾಳಿ ನಡೆಸಿದ್ದೇವೆ ಎಂದು ಅಮೆರಿಕ ಹೇಳಿಕೊಂಡಿದೆ.
ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಶಾಂತಿ ಒಪ್ಪಂದದ ವಿಚಾರದಲ್ಲಿ ದಿನಕ್ಕೊಂದು ಅಚ್ಚರಿಯ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಇರಾನ್ ವಿರುದ್ಧದ ಯುದ್ಧದ ವಿಚಾರದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತಿನ ಜಟಾಪಟಿ ನಡೆಸಿರುವ ಟ್ರಂಪ್ ಈಗ ಸಂದರ್ಶನವೊಂದರಲ್ಲಿ ಮಾತಾಡುತ್ತಾ, ಒಂದು ದಿನ ನಾನು ಇರಾನ್‌ನ ಸರ್ವೋಚ್ಛ ನಾಯಕ ಮೊಜ್ತಾಬ್ ಖಮೇನಿಯನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.
