– ಅಶ್ವಥ್ ನಾರಾಯಣ್ ಇತಿಹಾಸ ತಿಳಿದುಕೊಳ್ಳಲಿ ಎಂದ ಡಿಕೆಶಿ
– ಡಿಕೆಶಿ ಉತ್ತಮ ಕೆಲಸ ಮಾಡುವಂತೆ ಹಾರೈಸುತ್ತೇನೆ ಅಂತ ಅಶ್ವಥ್ ನಾರಾಯಣ್ ತಿರುಗೇಟು
ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು (Kempegowda Utsav) ಇಂದು ರಾಜ್ಯಾದ್ಯಂತ ಆಚರಣೆ ಮಾಡಲಾಯಿತು. ರಾಜ್ಯ ರಾಜಧಾನಿ ಸದಾಶಿವನಗರದ ರಮಣಮಹರ್ಷಿ ಉದ್ಯಾನದಲ್ಲೂ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಮಾಜಿ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಮುಖಾಮುಖಿಯಾಗಿದ್ದರು. ಅಷ್ಟೇ ಅಲ್ಲದೇ ಪರಸ್ಪರರ ಮೇಲೆ ಮಾತಿನ ಪ್ರಹಾರ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೆಂಪೇಗೌಡರು ಇಡೀ ಬೆಂಗಳೂರನ್ನು ಅಭಿವೃದ್ಧಿ ಮಾಡಿ ಪೇಟೆಗಳನ್ನು ಕಟ್ಟಿದವರು. ಅವರೇನಾದರೂ ಜಾತಿ ನೋಡಿ ಪೇಟೆ ನಿರ್ಮಾಣ ಮಾಡಿದ್ದಾರಾ? ನಾನು ಬೆಂಗಳೂರಿನಲ್ಲಿ 6ನೇ ತರಗತಿ ತನಕ ಓದಿದವನು. ನನಗೂ ಬೆಂಗಳೂರಿಗೂ ವಿಶೇಷ ಸಂಬಂಧವಿದೆ. ಅಶ್ವಥ್ ನಾರಾಯಣ್ ರಾಜಕೀಯ ಮಾತನಾಡುತ್ತಾರೆ. ಆದರೆ ಅವರಿಗೆ ಇತಿಹಾಸ ಗೊತ್ತಿಲ್ಲ. ಇತಿಹಾಸ ಗೊತ್ತಿಲ್ಲದಿದ್ದರೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ನೀವು ಇತಿಹಾಸ ತಿಳಿದುಕೊಳ್ಳಿ ಎಂದು ವೇದಿಕೆಯಲ್ಲೇ ಇದ್ದ ಮಾಜಿ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಡಾ.ಸಿ.ಎನ್.ಅಶ್ವಥ್ ನಾರಾಯಣ್ (Ashwath Narayan), ಪ್ರಶ್ನೆ ಮಾಡಲು ನನಗೂ ರಾಮನಗರಕ್ಕೂ ಏನು ಸಂಬಂಧ ಎಂದು ಡಿಕೆಶಿಗೆ ಪ್ರಶ್ನೆ ಮಾಡಿದ್ದಾರೆ. ಯಾವ ಸರ್ಕಾರ ಕೂಡ ಕೊಡದಷ್ಟು ಯೋಜನೆಗಳನ್ನ ನಾವು ರಾಮನಗರಕ್ಕೆ ಕೊಟ್ಟಿದ್ದೇವೆ. ರಾಮನಗರವನ್ನು ಅಭಿವೃದ್ಧಿ ಮಾಡಿದ್ದೇವೆ. ಕೆಂಪಾಂಬುದಿಯಲ್ಲಿ ಯೋಜನೆಗಳು ಮಾತ್ರ ಘೋಷಣೆಯಾಗಿದ್ದವು. ಆದರೆ ನಾವು ಅಭಿವೃದ್ಧಿ ಮಾಡಿದ್ದೇವೆ. ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿಯಾಗಿದೆ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸ ತಿಳಿಯಲಿದೆ. ನನ್ನ ಕೊಡುಗೆ ಏನು ಎಂದು ಕೆಲಸವೇ ಮಾತನಾಡುತ್ತದೆ ಎಂದಿದ್ದಾರೆ.
ವಲಸಿಗರ ವಿಚಾರದಲ್ಲಿ ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಕಳೆದ ಅವಧಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿರಲಿಲ್ಲ. ಕಾಂಗ್ರೆಸ್‍ನಿಂದ ಶಾಸಕರು ಬಂದಿದ್ದರಿಂದ ಸರ್ಕಾರ ರಚನೆ ಸಾಧ್ಯವಾಯಿತು. ಅವರನ್ನು ವಲಸಿಗರು ಎಂದು ಕರೆಯುವುದು ತಪ್ಪು. ಅವರು ನಮ್ಮ ಪಕ್ಷದ ಆಸ್ತಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜಕೀಯದಲ್ಲಿ ಎಲ್ಲಾ ಗುರುಹಿರಿಯರು ಸಲಹೆ ನೀಡುತ್ತಾರೆ. ರಾಜಕೀಯವಾಗಿ ದ್ವೇಷ ವೈಮನಸ್ಸು ಬೆಳೆಸಿಕೊಳ್ಳಬೇಡಿ. ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ ಎಂದು ಆಶೀರ್ವಾದ ಮಾಡಿದ್ದಾರೆ. ಅದರಂತೆ ಡಿ.ಕೆ ಶಿವಕುಮಾರ್ ಅವರಿಗೆ ಉತ್ತಮ ಕೆಲಸ ಮಾಡುವಂತೆ ಹಾರೈಸುತ್ತೇನೆ ಚಾಟಿ ಬೀಸಿದ್ದಾರೆ.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಾಲಾನಂದ ಶ್ರೀಗಳು ಕೂಡ ಭಾಗಿಯಾಗಿದ್ದರು. ಈ ವೇಳೆ ಡಿಕೆಶಿ ಮತ್ತು ಅಶ್ವಥ್ ನಾರಾಯಣ್ ಇಬ್ಬರಿಗೂ ಕಿವಿಮಾತು ಹೇಳಿದರು.