ಬೆಂಗಳೂರು: ದೇಶ ಇಂದು ವಿವಿಧ ರೀತಿಯಲ್ಲಿ ಕವಲು ಹಾದಿಯಲ್ಲಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಬಿಜೆಪಿಯವರು ಹಿಂದೂಗಳು, ಅವರೇ ಮುಂದೆ ಎಂಬ ನೀತಿ ಅವರದ್ದು. ಆದರೆ ನಾವು ಹಿಂದೂ, ಮುಸಲ್ಮಾನರು, ಸಿಖ್ಖರು, ಕ್ರೈಸ್ತರು, ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರು, ಹಿಂದುಳಿದವರು ಎಲ್ಲರೂ ಒಂದು ಎಂಬುದು ನಮ್ಮ ನೀತಿ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.
Advertisement
ನಾನು ಬಿಜೆಪಿ ಸ್ನೇಹಿತರಿಗೆ ಒಂದು ವಿಚಾರ ಹೇಳಲು ಬಯಸುತ್ತೇನೆ. ಇಲ್ಲಿ ಎಲ್ಲ ಧರ್ಮದ ನಾಯಕರು ಇದ್ದಾರೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ. ಈ ಸಿದ್ಧಾಂತವನ್ನು ನಾವು ತೆಗೆದುಕೊಂಡು ಹೋಗುತ್ತಿದ್ದೇವೆ. ರಾಜ್ಯದಲ್ಲಿ ನಡೆದ ವಿವಿಧ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಸರ್ಕಾರ ಜಾತಿ, ಧರ್ಮದ ಆಧಾರದ ಮೇಲೆ ಸಮಾಜ ಒಡೆಯುವ ಪ್ರಯತ್ನ ನಡೆಸುತ್ತಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಪ್ರಸ್ತಾಪಿಸಿದ ಸ್ಪೀಕರ್ ಕಾಗೇರಿ
Advertisement
Advertisement
ಮುಖ್ಯಮಂತ್ರಿ ಜಿಲ್ಲೆ ಹಾನಗಲ್, ಮಸ್ಕಿ, ವಿಧಾನ ಪರಿಷತ್‌ನಲ್ಲಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ಸಂಸತ್ ಉಪಚುನಾವಣೆಯಲ್ಲಿ ಕೇವಲ 3 ಸಾವಿರ ಮತಗಳಲ್ಲಿ ಸೋತಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದು ರಾಜ್ಯದ ಜನರ ತೀರ್ಪು ಏನು ಎಂದು ಈಗಾಗಲೇ ಪ್ರಕಟವಾಗಿದೆ ಎಂದು ತಿಳಿಸಿದರು.
Advertisement
ಉತ್ತರ ಭಾರತದ ಐದು ರಾಜ್ಯಗಳ ಚುನಾವಣೆ ಪೈಕಿ ಪಂಜಾಬ್‌ನಲ್ಲಿ ನಾವು ಸೋತಿದ್ದೇವೆ. ನಾವು ತೀರ್ಪನ್ನು ಒಪ್ಪುತ್ತೇವೆ. ಗೋವಾದಲ್ಲಿ ನಮ್ಮ ಬಳಿ ಕೇವಲ 2 ಶಾಸಕರಿದ್ದರು, ಇಂದು 12 ಶಾಸಕರಿದ್ದಾರೆ. ಪಂಜಾಬ್‌ನಲ್ಲಿ ಆಂತರಿಕ ವಿಚಾರದಿಂದ ಸೋತಿದ್ದೇವೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯವರ ಸಂಖ್ಯೆ ಕುಸಿದಿದೆ. ಅವರೀಗ ಜಾತಿ, ಧರ್ಮದ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾರ್ಚ್ 31ರಂದು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಮುಕ್ತಾಯಗೊಳ್ಳುತ್ತಿದ್ದು, ಸದಸ್ಯತ್ವ ಪಕ್ಷ ಆಧಾರಸ್ತಂಭ. ಹೀಗಾಗಿ ನಾನು ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಿಗದಿ ಆಗಿದೆ. ನೀವೆಲ್ಲರೂ ಸೇರಿ 45 ಲಕ್ಷ ಸದಸ್ಯರನ್ನು ಮಾಡಿದ್ದು, ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದೀರಿ. ಇದಕ್ಕೆ ನಾನು ಕಾರಣನಲ್ಲ, ನೀವು ಕಾರಣ ಎಂದು ಅಭಿನಂದನೆ ಸಲ್ಲಿಸಿದರು.
ಈ ಸದಸ್ಯತ್ವದ ಶಕ್ತಿ ಏನು ಎಂದು ಇನ್ನೊಮ್ಮೆ ತಿಳಿಸುತ್ತೇನೆ. ನಮ್ಮ ಆಚಾರ ವಿಚಾರ ಪ್ರಚಾರ ಮಾಡುವವರಿಗೆ ಇದು ಶಕ್ತಿ ತುಂಬಿದಂತೆ. ಇಲ್ಲಿ ಇಕ್ಬಾಲ್ ಅನ್ಸಾರಿ ಇದ್ದಾರೆ. ಅವರ ಜಿಲ್ಲೆಯಲ್ಲಿ ಜನ ಕರೆ ಮಾಡಿ ಈ ಸರ್ಕಾರ ಸಾಕು, ಈ ಬೆಲೆ ಏರಿಕೆ ಸಾಕಾಗಿದೆ. ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯರಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಸೋನಿಯಾ ಗಾಂಧಿ ಬೆಲೆ ಏರಿಕೆ ವಿರುದ್ಧ 31 ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ. ನೀವೆಲ್ಲರೂ ನಿಮ್ಮ ಮನೆ ಬಾಗಿಲಲ್ಲಿ ಗ್ಯಾಸ್ ಸಿಲಿಂಡರ್, ವಾಹನ ನಿಲ್ಲಿಸಿ ಅದಕ್ಕೆ ಹೂವಿಟ್ಟು ಜಾಗಟೆ ಬಾರಿಸಿ ಪ್ರತಿಭಟನೆ ಮಾಡಿ ಎಂದು ಕರೆ ನೀಡಿದರು. ಇದನ್ನೂ ಓದಿ: ತಾಯಿಗೆ ಐಟಿ ನೋಟಿಸ್ ನೀಡಿರುವ ಬಗ್ಗೆ ಆತಂಕ ಇಲ್ಲ: ಹೆಚ್‌ಡಿಕೆ
ನಾವು ಕೋವಿಡ್ ಸಮಯದಲ್ಲಿ 100 ನಾಟೌಟ್, ರೈತರ ಪರ ಹೋರಾಟ ಮಾಡಿದ್ದೇವೆ. ದೇಶದ ರೈತರು, ಬಡವರು, ಸಾಮಾಜಿಕ ನ್ಯಾಯದ ಪರ, ಕುಡಿಯುವ ನೀರಿಗೆ ಹೋರಾಟ ಮಾಡಿದ್ದೇವೆ. ಇದಕ್ಕಾಗಿ ಬಿಜೆಪಿಯವರು ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಅವರ ನಾಯಕರ ಮೇಲೆ ಕೇಸ್ ಹಾಕಿಲ್ಲ. ಬೊಮ್ಮಾಯಿ ಅವರೇ, ಕೇಸ್‌ಗಳಿಗೆ ಕಾಂಗ್ರೆಸ್ ನಾಯಕರು ಹೆದರುವುದಿಲ್ಲ. ನಿಮ್ಮನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂದು ನಮಗೂ ಗೊತ್ತಿದೆ ಎಂದು ಟಾಂಗ್ ನೀಡಿದರು.
ಈಗ ಭಗವದ್ಗೀತೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಎಂಬ ವಿಚಾರ ಎತ್ತಿದ್ದಾರೆ. ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಇನ್ನೂ ಹುಟ್ಟೇ ಇರಲಿಲ್ಲ. ಅವರು ಕೇವಲ 2 ರೂ.ಗೆ ಭಗವದ್ಗೀತೆ ಪುಸ್ತಕ ಹಂಚಿದ್ದರು. ರಾಜೀವ್ ಗಾಂಧಿ ದೇಶದ ಪ್ರಧಾನಿ ಆಗಿದ್ದಾಗ ದೂರದರ್ಶನದಲ್ಲಿ ಪ್ರತೀ ಭಾನುವಾರ ರಾಮಾಯಣ, ಮಹಾಭಾರತ, ಹನುಮಂತನ ಕಥೆಗಳನ್ನು ಸಾರುವ ಧಾರಾವಾಹಿಗಳನ್ನು ಪ್ರಸಾರ ಮಾಡಿದ್ದರು. ನಮ್ಮ ದೇಶದ ಸಂಸ್ಕೃತಿ ತೋರಿಸಿದ್ದರು. ಇದೆಲ್ಲವನ್ನು ನೀವು ತೋರಿಸಿದ್ದಿರೋ, ರಾಜೀವ್ ಗಾಂಧಿ ಅವರು ತೋರಿಸಿದ್ದರೋ ಎಂದು ಪ್ರಶ್ನಿಸಿದರು.
ನಾನಿಲ್ಲಿ ಪಠ್ಯ ಪುಸ್ತಕ ತಂದಿದ್ದೇನೆ. ಇವುಗಳಲ್ಲಿ ರಾಮಾಯಣ, ಭಗವದ್ಗೀತೆ ಅಂಶಗಳು ಇವೆಯಲ್ಲ. ನಾನು ಶಾಲೆಯಲ್ಲಿದ್ದಾಗಲೇ ಭಗವದ್ಗೀತೆ ಶ್ಲೋಕ ಕಲಿತಿದ್ದೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಇದನ್ನು ನೀವು ಕಲಿಸಿದ್ದಿರಾ? ಕಾಂಗ್ರೆಸ್‌ನವರು ಪಠ್ಯಪುಸ್ತಕದಲ್ಲಿ ಸೇರಿಸಿದ್ದ ಅಂಶ ಹಾಗೂ ರಾಜೀವ್ ಗಾಂಧಿ ತೋರಿಸಿದ್ದ ಧಾರಾವಾಹಿಗಳಿಂದ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಕಲಿಸಿತ್ತು ಎಂದು ತಿಳಿಸಿದರು.
ನಾವೆಲ್ಲರೂ ಹಿಂದೂಗಳಲ್ಲವೇ? ಈ ರಾಷ್ಟ್ರಧ್ವಜ ನಮ್ಮ ಧರ್ಮ ಎಂದು ರಾಹುಲ್ ಗಾಂಧಿ ಹೇಳಿದರು. ನಮ್ಮ ಪಾಲಿಗೆ ಭಗವದ್ಗೀತೆ, ಕುರಾನ್, ಬೈಬಲ್ ಎಲ್ಲವೂ ನಮ್ಮ ಸಂವಿಧಾನ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನ. ಇದನ್ನು ರಕ್ಷಣೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಚರಿತ್ರೆ, ನಾಯಕತ್ವ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರದ ಬಗ್ಗೆ ಚಿಂತೆ ಮಾಡುತ್ತಿಲ್ಲ ಎಂದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ: ಸಿದ್ದಲಿಂಗ ಸ್ವಾಮೀಜಿ
ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿದ್ದಾಗ ಪ್ರಧಾನಮಂತ್ರಿಯಾಗುವಂತೆ ಅಹ್ವಾನ ನೀಡಲಿಲ್ಲವೇ? ಆಗ ಅವರು ದೇಶಕ್ಕೆ ಒಬ್ಬ ಆರ್ಥಿಕ ತಜ್ಞನ ಅಗತ್ಯವಿದೆ ಎಂದು ತಮ್ಮ ಪಾಲಿಗೆ ಬಂದ ಅಧಿಕಾರವನ್ನು ಮನಮೋಹನ್ ಸಿಂಗ್‌ಗೆ ನೀಡಲಿಲ್ಲವೇ? ಅವರನ್ನು 10 ವರ್ಷ ಪ್ರಧಾನಿ ಮಾಡಿದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕೆ ಪ್ರಾಣ ತ್ಯಾಗ ಮಾಡಿದರು. ಸೋನಿಯಾಗಾಂಧಿ ಈ ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದರು ಎಂದು ಹೇಳಿದರು.
ಇಂದು ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುತ್ತೀರಿ. ಈಗ ನೂತನ ಶಿಕ್ಷಣ ನೀತಿ ಜಾರಿಗೆ ತರುತ್ತಿದ್ದಾರೆ. ಇದು ನಾಗ್ಪುರ ಶಿಕ್ಷಣ ನೀತಿ. ಈಗಿರುವ ಶಿಕ್ಷಣ ನೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಎಷ್ಟು ಜನ ವೈದ್ಯರು, ಇಂಜಿನಿಯರ್‌ಗಳಾಗಿಲ್ಲಾ? ರಾಜ್ಯದಲ್ಲಿ 63 ಮೆಡಿಕಲ್ ಕಾಲೇಜುಗಳಿವೆ. 240 ಇಂಜಿನಿಯರಿಂಗ್ ಕಾಲೇಜು ಗಳಿವೆ. ಬೆಂಗಳೂರು ಸಿಲಿಕಾನ್ ಸಿಟಿ ಮಾಡಿದ್ದೇವೆ. ನಾವ್ಯಾರೂ ವಿದ್ಯಾವಂತ, ಬುದ್ಧಿವಂತರಲ್ಲವೇ? ಈ ದೇಶ ರಾಜ್ಯದಿಂದ ಪ್ರಪಂಚಕ್ಕೆ ಮಾನವಸಂಪನ್ಮೂಲ ಕೊಟ್ಟಿಲ್ಲವೇ ಎಂದು ಕೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದಾಗ ಒಂದು ಮಾತು ಹೇಳಿದ್ದರು. ಒಂದು ಕಾಲವಿತ್ತು ವಿಶ್ವದ ಅನೇಕ ನಾಯಕರು ಮೊದಲು ದೆಹಲಿಗೆ ಹೋಗಿ, ಅಲ್ಲಿಂದ ಭಾರತದ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದರು. ಆದರೆ ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಹೋಗುತ್ತಾರೆ ಎಂದು ಹೇಳಿದರು.
ನಿಮ್ಮಲ್ಲಿ ವಿಶ್ವಾಸ ಇರಲಿ. ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆ ಆಯ್ತು ಎಂದು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ. ನಾವೆಲ್ಲ ಕಾಂಗ್ರೆಸ್ ಕಾರ್ಯಕರ್ತರು. ನಾವೆಲ್ಲರೂ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ನಾಯಕತ್ವ ಇದೆ. ನಾವು ಹಳ್ಳಿ ಹಳ್ಳಿಗೆ ನಮ್ಮ ಆಚಾರ ವಿಚಾರವನ್ನು ತೆಗೆದುಕೊಂಡು ಹೋಗಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
ಕಿತ್ತೂರು ಕರ್ನಾಟಕದಲ್ಲಿ ಒಂದು ಕಾರ್ಯಕ್ರಮ ರೂಪಿಸುವಂತೆ ಹೆಚ್‌ಕೆ ಪಾಟೀಲ್, ಎಂಬಿ ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದೇನೆ. ಕಲ್ಯಾಣ ಕರ್ನಾಟಕದಲ್ಲಿ ಇನ್ನೊಂದು ಕಾರ್ಯಕ್ರಮ. ಮಲೆನಾಡು ಹಾಗೂ ಕರಾವಳಿ ಕರ್ನಾಟಕ ಹಾಗೂ ಬಯಲು ಸೀಮೆ ಕರ್ನಾಟಕದಲ್ಲೂ ಹೋರಾಟ ಮಾಡೋಣ. ನಾವು ಕುಡಿಯುವ ನೀರು, ರೈತನಿಗಾಗಿ ಹೋರಾಟ ಮಾಡಲು ನಮ್ಮ ನೀರು ನಮ್ಮ ಹಕ್ಕು ಎಂದು ಹೆಜ್ಜೆ ಹಾಕಿದ್ದೇವೆ. ನಿಮ್ಮೆಲ್ಲರಿಗೂ ಪಕ್ಷದ ಪರವಾಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದರು.
ಈಗ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಕಾಂಗ್ರೆಸ್ ಸದಸ್ಯರಾಗುವುದೇ ದೊಡ್ಡ ಭಾಗ್ಯ. ಭ್ರಷ್ಟ ಸರ್ಕಾರದ ಬಗ್ಗೆ ಗಂಟೆಗಟ್ಟಲೇ ಮಾತನಾಡಬಹುದು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಮನವರು ಏಪ್ರಿಲ್ ತಿಂಗಳಿಂದ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಕೆಂಪಣ್ಣನವರೇ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಿಮಗೆ ನಾವು ಬಲ ತುಂಬುತ್ತೆವೆ ಎಂದು ಭರವಸೆ ನೀಡಿದರು.
2 ಲಕ್ಷ ಗುತ್ತಿಗೆದಾರರು ಇರುವ ಸಂಘ. ಮಾಧ್ಯಮದಲ್ಲಿ ಒಂದು ವರದಿ ಬಂತು, ಪೊಲೀಸ್ ಇಲಾಖೆಯಲ್ಲಿ ಒಂದೊಂದು ಹುದ್ದೆಗೆ ಒಂದೊಂದು ದರ ನಿಗದಿ ಮಾಡಿದ್ದಾರೆ. ನಿಮಗೆ ಮಾನ ಮಾರ್ಯಾದೆ ಬೇಡವೇ? ಈ ಆರೋಪ ಮಾಡುತ್ತಿರುವುದು ನಾವಲ್ಲ. ಮಾಧ್ಯಮಗಳು ನಿಮ್ಮ ಬಂಡವಾಳ ಬಯಲು ಮಾಡಿ, ನಿಮ್ಮನ್ನು ಬೆತ್ತಲೆ ಮಾಡುತ್ತಿವೆ ಎಂದು ಆರೋಪಿಸಿದರು.
ಕೋವಿಡ್ ಸಮಯದಲ್ಲಿ ನಾವು ಯಾರೂ ಮನೆಯಲ್ಲಿ ಕೂರಲಿಲ್ಲ. ಕೂಲಿಕಾರ್ಮಿಕರನ್ನು ಅವರ ಮನೆಗಳಿಗೆ ಕಳುಹಿಸಲು ಮೂರುಪಟ್ಟು ದರ ತೆಗೆದುಕೊಳ್ಳಲು ಮುಂದಾದರು. ನಾವು ಚೆಕ್ ಕೊಟ್ಟ ಮೇಲೆ ಅವರನ್ನು ಉಚಿತವಾಗಿ ಕಳುಹಿಸಲಾಯಿತು. ಆಕ್ಸಿಜನ್ ಇಲ್ಲದೆ ಜನ ಸತ್ತಾಗ ಅವರ ಮನೆಗೆ ಒಬ್ಬ ಮಂತ್ರಿ ಹೋಗಿ ಭೇಟಿ ಮಾಡಲಿಲ್ಲ. ಕೋವಿಡ್ ನಿಂದ 4 ಲಕ್ಷ ಜನ ಸತ್ತಿದ್ದು, 50 ಸಾವಿರ ಜನರಿಗೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ಈ ಸರ್ಕಾರ ಕಿತ್ತೊಗೆಯಲು ನೀವು ಸಂಕಲ್ಪ ಮಾಡಬೇಕು ಎಂದು ಜನರಿಗೆ ಕರೆ ಕೊಟ್ಟರು.