ಬೆಂಗಳೂರು: ಒಂದು ರಾಷ್ಟ್ರ, ಒಂದು ಚುನಾವಣೆ ಕೂಗು ಮತ್ತೆ ಎದ್ದಿದೆ. ವಿಧಾನಸಭೆಯಲ್ಲಿ ಇವತ್ತು ಚುನಾವಣೆ ವ್ಯವಸ್ಥೆಯ ಸುಧಾರಣೆಯ ಅಗತ್ಯತೆ ಕುರಿತಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಸ್ತಾವಿಕ ಭಾಷಣದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಜಪ ಮಾಡಿದ್ದಾರೆ.
Advertisement
ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದ ವಿಚಾರ ಪ್ರಸ್ತಾಪ ಮಾಡಿರುವ ಸ್ಪೀಕರ್, ಒಂದು ರಾಷ್ಟ್ರ ಒಂದು ಚುನಾವಣೆ ಮೂಲಕ ಚುನಾವಣಾ ಖರ್ಚು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ನಾಳೆಯಿಂದ ಎರಡು ದಿನಗಳ ಕಾಲ ಚುನಾವಣೆ ವ್ಯವಸ್ಥೆಯ ಸುಧಾರಣೆ ಅಗತ್ಯತೆ ಕುರಿತು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಡೆ ಬಗ್ಗೆ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: ರೂಪಾಯಿ ನೀಡಿ ರಷ್ಯಾದಿಂದ ತೈಲ ಖರೀದಿ ಮಾಡಲ್ಲ: ಕೇಂದ್ರ ಸರ್ಕಾರ
Advertisement
ವಿಧಾನಸಭೆಯಲ್ಲಿ ಚುನಾವಣೆ ವ್ಯವಸ್ಥೆಯ ಸುಧಾರಣೆಯ ಅಗತ್ಯತೆ ಕುರಿತಂತೆ 24 ಪುಟಗಳ ಪ್ರಾಸ್ತಾವಿಕ ಭಾಷಣ ಮಾಡಿದ್ರು. ಚುನಾವಣೆಗಳು ಜನಾದೇಶವಾಗುವ ಬದಲು ಧನಾದೇಶ ವಾಗುತ್ತಿವೆ. ಚುನಾವಣೆಗಳಲ್ಲಿ ಅಸಹ್ಯ ಪಡುವಷ್ಟು ಹಣ ಶಕ್ತಿಯ ಪಾತ್ರ ಇಡೀ ವ್ಯವಸ್ಥೆಗೆ ರೋಗ ತರುವಷ್ಟು ಇದೆ. ಅಪರಾಧಿಗಳ ಪಾತ್ರ, ಜಾತಿ-ಧರ್ಮ-ಅಂಗ ಮತ್ತೆಲ್ಲ ತರಹದ ಪ್ರಭಾವಗಳು ಚುನಾವಣೆಗಳನ್ನು ರೋಗಗ್ರಸ್ತವಾಗಿಸಿವೆ. ಚುನಾವಣೆಯ ಸಂದರ್ಭದಲ್ಲಿ ಮತ ಗಿಟ್ಟಿಸಲು ಕೊಂಡೊಯ್ಯುತ್ತಿದ್ದ ನೂರಾರು ಕೋಟಿ ನಗದು ಹಣ, ಮದ್ಯ, ಆಹಾರ ಪದಾರ್ಥಗಳು, ಮಾದಕ ದ್ರವ್ಯಗಳು, ಮತದಾರರನ್ನು ಆಕರ್ಷಿಸಲು ನೀಡಲಾಗುತ್ತಿರುವ ಉಡುಗೊರೆ ಇತ್ಯಾದಿಗಳನ್ನು ಆಯೋಗದ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಘಟನೆಗಳು ಹೊಸದಲ್ಲದಿದ್ದರೂ ನ್ಯಾಯಯುಕ್ತತೆಯ ಬಗ್ಗೆ ಆತಂಕವನ್ನು ಹೆಚ್ಚಿಸುತ್ತದೆ. ರಾಜಕೀಯದ ಅಧೋಗತಿಯೋ ಭಾರತದ ಚುನಾವಣಾ ವ್ಯವಸ್ಥೆಯ ರೋಗಗ್ರಸ್ಥ ಸ್ಥಿತಿಯೋ ತಿಳಿಯದು. ಅಥವಾ ಇವೆರಡೂ ಆಗಿದ್ದರೆ ರೋಗ ಉಲ್ಬಣಿಸುವ ಮೊದಲೇ ಚಿಕಿತ್ಸೆಯನ್ನು ಮಾಡಬೇಕಾದವರು ಶಾಸನ ಸಭೆಯ ಸದಸ್ಯರುಗಳಲ್ಲದೆ ಮತ್ತಾರು ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ನಮ್ಮ ಚುನಾವಣಾ ಪ್ರಕ್ರಿಯೆಯು ನ್ಯಾಯಯುತ ಮತ್ತು ನಿರ್ಭೀತವಾಗಿರುವ ರಾಷ್ಟ್ರವನ್ನು ನಿರ್ಮಿಸುವುದು ನಮ್ಮ ಸದುದ್ದೇಶವಾಗಿದೆ. ಚುನಾವಣಾ ಅಕ್ರಮಗಳು ಪ್ರಜಾಪ್ರಭುತ್ವಕ್ಕೆ ನಿಧಾನಗತಿಯ ಪಾಶ್ರ್ವವಾಯು ಎಂದು ಕರೆಯಬಯಸುತ್ತೇನೆ. ಚುನಾವಣೆಗಳು ಕಲುಷಿತವಾದರೆ ಪ್ರಜಾಪ್ರಭುತ್ವವೆಂಬ ವೃಕ್ಷ ಉಳಿಯಲಾರದು. ಆದುದರಿಂದ ಬೆಳೆಯಲಾರದು ಮತ್ತು ಈ ವೃಕ್ಷ ಇನ್ನೂ ಹೆಮ್ಮರವಾಗಿ ಬೆಳೆಯಬೇಕಾದರೆ ಒಳ್ಳೆಯ ನೀರನ್ನು ಉಣಿಸಬೇಕಾದುದು ನಮ್ಮ ಜವಾಬ್ದಾರಿ. ಪ್ರಜಾಪ್ರಭುತ್ವದ ಚುನಾವಣೆಗಳೆಂಬ ಐಕ್ಯಮತದ ಹಬ್ಬಗಳು ಸಂಭ್ರಮ, ಶ್ರದ್ಧೆ ಮತ್ತು ಪರಿಶುದ್ಧವಾಗಿ ನಡೆಯಬೇಕು ಎನ್ನುವುದು ನಮ್ಮೆಲ್ಲರ ಕಳಕಳಿ. ಈ ನಿಟ್ಟಿನಲ್ಲಿ ಕರ್ನಾಟಕವು ಚುನಾವಣಾ ಸುಧಾರಣೆಗೆ ದೇಶದಲ್ಲಿ ಮೊಟ್ಟ ಮೊದಲ ಹೆಜ್ಜೆ ಇಡಲು ಮತ್ತು ಅದಕ್ಕೆ ತಾವುಗಳೆಲ್ಲರೂ ಚರ್ಚೆಯಲ್ಲಿ ಭಾಗಿಯಾಗಿ ಅಂತಾ ಮನವಿ ಮಾಡಿದ್ರು. ಇದೇ ವೇಳೆ ಚುನಾವಣೆ ಸುಧಾರಣೆಗೆ ಸಲಹೆ ರೂಪದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರು ಪರ್ಸಂಟೇಜ್ ಕೊಡುವುದು ನಿಲ್ಲಿಸಿ ಎಲ್ಲವೂ ಸರಿ ಹೋಗುತ್ತದೆ: ಎಚ್‍ಡಿಕೆ
ಸುಧಾರಣೆ ಸಲಹೆಗಳು:
ಚುನಾವಣೆಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ: ಚುನಾವಣಾ ಪ್ರಚಾರ ಪ್ರಕ್ರಿಯೆಯನ್ನು ರಾಷ್ಟ್ರೀಕರಣ ಮಾಡಿ, ಅದರ ವೆಚ್ಚವನ್ನು ಇಳಿಸಿ, ವೆಚ್ಚವನ್ನು ಸರ್ಕಾರವೇ/ ಚುನಾವಣಾ ಆಯೋಗವೇ ಭರಿಸುವಂತೆ ಮಾಡುವುದು. ಚುನಾವಣಾ ಪ್ರಚಾರ ಪುಸ್ತಿಕೆ: ಒಂದು ಮನೆಗೆ ಒಂದರಂತೆ, ಪ್ರತಿಕ್ಷೇತ್ರದಲ್ಲೂ ಕಣದಲ್ಲಿರುವ ಎಲ್ಲಾ ಪಕ್ಷಗಳ, ಅಭ್ಯರ್ಥಿಗಳ ಬಗ್ಗೆ ಅಧಿಕೃತವಾಗಿ ಸಮಾನ ಪಟಗಳ ಮಿತಿಯಲ್ಲಿ ಅವರೇ ಒದಗಿಸಿದ ಬರಹಗಳನ್ನು ಒಂದು ಸಮಗ್ರ ಪುಸ್ತಿಕೆಯ ರೂಪದಲ್ಲಿ ಪ್ರಕಟಿಸಿ ವಿತರಿಸುವುದು. ಸರ್ವ ಪಕ್ಷಗಳಿಗೂ ಪ್ರಚಾರ ಸಭೆಗಳು: ಸ್ಪರ್ಧಿಸಿರುವ ಅಭ್ಯರ್ಥಿಗಳಿಗಾಗಿ ಪ್ರಚಾರ ಮಾಡಲು ಅವಕಾಶವಿರುವ ಸಾಮಾನ್ಯ ಸಾರ್ವಜನಿಕ ಸಭೆಗಳನ್ನು ಒದಗಿಸುವುದು. ವಿವಿಧ ಸ್ಥಳಗಳಲ್ಲಿ ಏರ್ಪಡಿಸುವುದು.
ಮಾಧ್ಯಮಗಳಲ್ಲಿ ಸಮಾನ ಅವಕಾಶ: ಶ್ರವ್ಯ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರತೀ ಅಭ್ಯರ್ಥಿಗೂ ಪ್ರಚಾರಕ್ಕಾಗಿ ಸಮಾನ ಸ್ಥಳ ಮತ್ತು ಕಾಲಾವಕಾಶಗಳನ್ನು ಮಾಡಿಕೊಡುವುದು. ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲೂ ಸೆನ್ಸಾರ್ ಮಾಡಿದ ಸಾಮಗ್ರಿಗಳನ್ನು ಪ್ರಚಾರಕ್ಕೆ ವ್ಯವಸ್ಥೆ ಮಾಡುವುದು. ಚುನಾವಣಾ ಕ್ಷೇತ್ರ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಕೃತ ಚುನಾವಣಾ ಪ್ರಚಾರವನ್ನು ಚುನಾವಣಾ ಆಯೋಗ ನೇಮಿಸುವುದು ಹಾಗೂ ಉಸ್ತುವಾರಿ ಮಾಡುವುದು. ವಿಶೇಷ ಚುನಾವಣಾ ಕೋರ್ಟ್‍ಗಳ ರಚನೆ: ಚುನಾವಣೆಗಳಲ್ಲಿ ಕ್ರಿಮಿನಲ್ ಆಪಾದನೆ ಹೊತ್ತ ಶಾಸಕರ ಪ್ರಕರಣಗಳನ್ನು ಆರು ತಿಂಗಳೊಳಗೆ ಆರೋಪಗಳು ರುಜುವಾತಾಗಿ ಶಿಕ್ಷೆಗೊಳಗಾದವರನ್ನು ಅನರ್ಹಗೊಳಿಸಿ ಚುನಾವಣೆಯಲ್ಲಿ ಸ್ಥಾನದಲ್ಲಿದ್ದ ಅಭ್ಯರ್ಥಿಯನ್ನು ಅರ್ಹನೆಂದು ಘೋಷಿಸುವುದು. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ರದ್ದು – ಸರ್ಕಾರಕ್ಕೆ ಮಾಹಿತಿ ರವಾನೆ
ಒಂದು ಮತಕ್ಷೇತ್ರದಲ್ಲಿ ಕನಿಷ್ಠ ಮಿತಿಯಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲು ಶಾಸನ ರೂಪಿಸುವುದು. ರಾಜಕೀಯ ಪಕ್ಷಗಳು, ದೇಶದಾದ್ಯಂತ ಒಟ್ಟು ಮತ ಹೆಚ್ಚಾಗಿ ಪಡೆದೂ ಕಡಿಮೆ ಸ್ಥಾನಗಳನ್ನು ಗಳಿಸುತ್ತಿರುವ ಕಾರಣದಿಂದ ರಾಜಕೀಯ ಪಕ್ಷಗಳಿಗೆ ಮಿತಿಗೊಳಿಸುವುದು. ಕಡ್ಡಾಯ ಮತದಾನ ವ್ಯವಸ್ಥೆ: ಪ್ರತಿ ಮತದಾರನೂ ಚುನಾವಣೆಯ ದಿನದಂದು ಮತ ಚಲಾಯಿಸಲೇಬೇಕು. ಭಾಗಿಯಾಗದ ಮತದಾರನಿಗೆ ಸೌಲಭ್ಯಗಳ ಕಡಿತ ಮಾಡುವುದು. ಒಂದು ರಾಷ್ಟ್ರ ಒಂದು ಚುನಾವಣೆಯ ಮೂಲಕ ಚುನಾವಣಾ ವೆಚ್ಚವನ್ನು ಕಡಿತಗೊಳಿಸುವುದು. ರಾಜಕೀಯ ಪಕ್ಷಗಳೊಳಗಿನ ಆಂತರಿಕ ಚುನಾವಣೆಗಳಲ್ಲ ಪಾರದರ್ಶಕತೆ ಮತ್ತು ಸ್ವಯಂ ಶಿಸ್ತು. ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಅನುಷ್ಠಾನದಲ್ಲಿ ಮತದಾರರು ಭಾಗಿಯಾಗಿ ಸಾಮಾಜಿಕ ಪರಿಶೋಧನೆಗೊಳಪಡಿಸುವುದು. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಸಾಮಾಜಿಕ ಮತ್ತು ರಾಜಕೀಯ ನಿರ್ಬಂಧನೆಗಳನ್ನು ವಿಧಿಸುವುದು. ಶುದ್ಧ ಚಾರಿತ್ರ್ಯ ಇರುವ ಮತ್ತು ಕ್ರಿಮಿನಲ್ ಹಿನ್ನೆಲೆ ಇಲ್ಲದ ಸಾಮಾಜಿಕ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾದ ಸ್ವಯಂ-ಶಿಸ್ತಿನ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು. ರಾಜಕೀಯ ಪಕ್ಷಗಳು ಚುನಾವಣಾ ದಿನಾಂಕಗಳ ಅಧಿಸೂಚನೆಯ ಮೊದಲು ಹಾಗೂ ಅಧಿಸೂಚನೆಯ ನಂತರ ಬೇರೆ ರಾಜಕೀಯ ಪಕ್ಷದಿಂದ ಬದಲಾದ ಅಭ್ಯರ್ಥಿಗಳನ್ನು ಕಣಕ್ಕಿಳಸದಂತೆ ನಿರ್ಧರಿಸುವುದು.