ಎಡಿನ್‌ಬರ್ಗ್: ಮುಂಬರುವ ಏಕದಿನ ವಿಶ್ವಕಪ್ (ODI World Cup 2027) ಹಾಗೂ ಟಿ20 ವಿಶ್ಚಕಪ್ ಮಾದರಿಯ ಪುರುಷರ ಟೂರ್ನಿಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಪುರುಷರ ಮಾದರಿಯ ಪ್ರಮುಖ ಟೂರ್ನಿಗಳಾದ 2027ರ ಏಕದಿನ ವಿಶ್ವಕಪ್ ಹಾಗೂ 2028ರ ಟಿ20 ವಿಶ್ವಕಪ್ ಮಾದರಿಯಲ್ಲಿ ಮಹತ್ವದ ಬದಲಾವಣೆಗಳಿಗೆ ಅನುಮೋದನೆ ನೀಡಿದೆ.
ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ (Edinburgh) ನಡೆದ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಮಾದರಿಯ ಉದ್ದೇಶಿತ ಪಂದ್ಯಗಳನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸುವುದು, ಪ್ರತಿ ಪಂದ್ಯಕ್ಕೂ ಹೆಚ್ಚಿನ ಮಹತ್ವ ನೀಡುವುದು ಹಾಗೂ ಆಟಗಾರರು ಮತ್ತು ಅಭಿಮಾನಿಗಳಿಗೆ ಉತ್ತಮ ಅನುಭವ ಒದಗಿಸುವುದು ಇದರ ಉದ್ದೇಶವಾಗಿದೆ ಎಂದು ಐಸಿಸಿ ಹೇಳಿದೆ.

2027ರ ಏಕದಿನ ವಿಶ್ವಕಪ್
2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ (South Africa), ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯ ವಹಿಸಲಿವೆ. ಟೂರ್ನಿಯಲ್ಲಿ 14 ತಂಡಗಳು ಭಾಗವಹಿಸಲಿದ್ದು, ಹೊಸ ಮೂರು ಹಂತದ ಮಾದರಿಯನ್ನ ಪರಿಚಯಿಸಲಾಗಿದೆ.
ಮೊದಲ ಹಂತ – ಸೂಪರ್ ಸೀರೀಸ್
ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ 14 ತಂಡಗಳಲ್ಲಿ ಕೊನೆಯ 3 ಸ್ಥಾನದಲ್ಲಿರುವ ತಂಡಗಳು ಪರಸ್ಪರ ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿವೆ. ಈ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಲಿದೆ.
ಎರಡನೇ ಹಂತ (30 ಪಂದ್ಯಗಳು)
ಉಳಿದ 12 ತಂಡಗಳನ್ನ ತಲಾ 6 ತಂಡಗಳ ಎರಡು ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ರೌಂಡ್-ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ಎರಡೂ ಗುಂಪುಗಳಿಂದ ಮೊದಲ 3 ತಂಡಗಳು ಹಾಗೂ ಎರಡೂ ಗುಂಪುಗಳ 4ನೇ ಸ್ಥಾನದಲ್ಲಿರುವ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 1 ತಂಡ ಸೇರಿ ಒಟ್ಟು ಏಳು ತಂಡಗಳು ಸೂಪರ್-7 ಹಂತಕ್ಕೆ ಪ್ರವೇಶಿಸಲಿವೆ.

ಮೂರನೇ ಹಂತ (21 ಪಂದ್ಯಗಳು) – ಸೂಪರ್-7
ಸೂಪರ್-7 ಹಂತದಲ್ಲಿ 7 ತಂಡಗಳು ಪರಸ್ಪರ ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಮೊದಲು ಸ್ಥಾನ ಪಡೆಯುವ ತಂಡವು 4ನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ಆಗ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳು ಇನ್ನೊಂದು ಸೆಮಿಫೈನಲ್‌ನಲ್ಲಿ ಎದುರಾಗುತ್ತವೆ.
2028ರ ಟಿ20 ವಿಶ್ವಕಪ್
2028ರ ಐಸಿಸಿ ಟಿ20 ವಿಶ್ವಕಪ್‌ಗೆ (T20 World Cup 2028) ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಟೂರ್ನಿಯಲ್ಲಿ 20 ತಂಡಗಳೇ ಮುಂದುವರಿದರೂ, ಸ್ಪರ್ಧೆಯ ಮಾದರಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಗುಂಪು ಹಂತ
20 ತಂಡಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿರಲಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-10 ಹಂತಕ್ಕೆ ಅರ್ಹತೆ ಪಡೆಯಲಿವೆ. 2026 ರ ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳನ್ನ ತಲಾ 5 ತಂಡಗಳಂತೆ 4 ಗುಂಪುಗಳಾಗಿ ವಿಭಾಗಿಸಲಾಗಿತ್ತು.

ಸೂಪರ್-10 ಹಂತ
ಒಟ್ಟು 10 ತಂಡಗಳನ್ನು ತಲಾ 5 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರಸ್ಥಾನ ಪಡೆದ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಲಿವೆ.
ಹೊಸ ಎಲಿಮಿನೇಟರ್ ಸುತ್ತು
ಉಳಿದ ಎರಡು ಸೆಮಿಫೈನಲ್ ಸ್ಥಾನಗಳಿಗಾಗಿ ಹೊಸದಾಗಿ ಎಲಿಮಿನೇಟರ್ ಪಂದ್ಯಗಳನ್ನ ಪರಿಚಯಿಸಲಾಗಿದೆ. ಒಂದು ಗುಂಪಿನ 2ನೇ ಸ್ಥಾನ ಪಡೆದ ತಂಡ ಮತ್ತೊಂದು ಗುಂಪಿನ 3ನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದ್ದು, ಈ ಎರಡು ಪಂದ್ಯಗಳ ವಿಜೇತರು ಸೆಮಿಫೈನಲ್‌ಗೆ ಪ್ರವೇಶಿಸಲಿದ್ದಾರೆ.
ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಮಾದರಿ ಹಿಂದಿನಂತೆಯೇ ಮುಂದುವರಿಯಲಿದೆ.
2028ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳು ಯಾವುವು?
2026ರ ಟಿ20 ವಿಶ್ವಕಪ್ ಪ್ರದರ್ಶನ ಮತ್ತು ತಂಡಗಳ ರ‍್ಯಾಂಕಿಂಗ್ ಆಧಾರದ ಮೇಲೆ ಈಗಾಗಲೇ 12 ತಂಡಗಳು 2028ರ ಟೂರ್ನಿಗೆ ಅರ್ಹತೆ ಪಡೆದಿವೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ.
ಉಳಿದ 8 ಸ್ಥಾನಗಳಿಗಾಗಿ 16 ತಂಡಗಳ ಗ್ಲೋಬಲ್ ಕ್ವಾಲಿಫೈಯರ್ ಟೂರ್ನಿ ನಡೆಯಲಿದೆ. 2026ರ ವಿಶ್ವಕಪ್‌ನಲ್ಲಿ ಆಡಿದ್ದರೂ ನೇರ ಅರ್ಹತೆ ಪಡೆಯದ ಕೆನಡಾ, ಇಟಲಿ, ನಮೀಬಿಯಾ, ನೇಪಾಳ, ನೆದರ್‌ಲ್ಯಾಂಡ್ಸ್, ಒಮನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಅಮೆರಿಕ ತಂಡಗಳು ನೇರವಾಗಿ ಈ ಗ್ಲೋಬಲ್ ಕ್ವಾಲಿಫೈಯರ್‌ಗೆ ಪ್ರವೇಶ ಪಡೆದಿವೆ. ಸ್ಕಾಟ್ಲೆಂಡ್‌ಗೆ 2026ರ ಟೂರ್ನಿಯಲ್ಲಿನ ವಿಶೇಷ ಸ್ಥಾನವನ್ನ ಪರಿಗಣಿಸಿ ಗ್ಲೋಬಲ್ ಕ್ವಾಲಿಫೈಯರ್‌ಗೆ ಬದಲಾಗಿ ನೇರವಾಗಿ ಯುರೋಪ್ ಪ್ರಾದೇಶಿಕ ಫೈನಲ್‌ಗೆ ಪ್ರವೇಶ ನೀಡಲಾಗಿದೆ.

ಗ್ಲೋಬಲ್ ಕ್ವಾಲಿಫೈಯರ್‌ನ ಉಳಿದ 8 ಸ್ಥಾನಗಳನ್ನು ಪ್ರಾದೇಶಿಕ ಅರ್ಹತಾ ಟೂರ್ನಿಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಆಫ್ರಿಕಾಗೆ 2 ಸ್ಥಾನಗಳು, ಏಷ್ಯಾಗೆ 2, ಯುರೋಪ್‌ಗೆ 2, ಅಮೆರಿಕಾಗೆ 1 ಹಾಗೂ ಈಸ್ಟ್ ಏಷ್ಯಾ-ಪೆಸಿಫಿಕ್ ಪ್ರದೇಶಕ್ಕೆ 1 ಸ್ಥಾನ ಮೀಸಲಾಗಿದೆ. ಪ್ರತಿ ವಿಭಾಗದಿಂದ ಅಗ್ರಸ್ಥಾನ ಪಡೆದ 1 ತಂಡ ಹಾಗೂ ಒಟ್ಟಾರೆ ಮುಂದಿನ 3 ಅತ್ಯುತ್ತಮ ತಂಡಗಳು, ಕನಿಷ್ಠ ಪ್ರದರ್ಶನದ ಮಾನದಂಡಗಳನ್ನ ಪೂರೈಸಿದರೆ, 2028ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.
ಇದರ ಜೊತೆಗೆ, ಹೊಸದಾಗಿ ಪ್ರಸ್ತಾಪಿಸಲಾಗಿರುವ ಮತ್ತೊಂದು ಐಸಿಸಿ ಪ್ರಮುಖ ಟೂರ್ನಿಗೆ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಪರಿಶೀಲನೆಯ ಬಳಿಕ ನವೆಂಬರ್‌ನಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ಅನುಮೋದನೆ ದೊರೆಯಲಿದೆ.
