ದಾವಣಗೆರೆ: ಜಗಳೂರು (Jagalur) ತಾಲೂಕನ್ನು ಸರ್ಕಾರ ಬರ ಪೀಡಿತ ತಾಲೂಕುಗಳ ಅಧಿಕೃತ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ (Congress) ಶಾಸಕ ಬಿ. ದೇವೇಂದ್ರಪ್ಪ (B.Devendrappa) ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜಗಳೂರಿನಲ್ಲಿ ಮಾತನಾಡಿದ ಅವರು, ನನ್ನ ತಾಲೂಕಿನ ಜನರಿಗೆ ನ್ಯಾಯ ಸಿಗದಿದ್ದರೆ ನಾನು ಶಾಸಕನಾಗಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಈ ನಿಟ್ಟಿನಲ್ಲಿ ನಾನು ಕಠಿಣ ಹಾಗೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಿದ್ಧನಾಗಿದ್ದೇನೆ ಎಂದರು. ಈ ಮೂಲಕ ತಾಲೂಕಿನ ಬರ ಪರಿಸ್ಥಿತಿ ನಿರ್ಲಕ್ಷ್ಯದ ಕುರಿತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಬಹಿರಂಗವಾಗಿಯೇ ಅವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Davanagere Bandh | ಪೊಲೀಸರ ವಿರುದ್ಧ ಹಲ್ಲೆ ಆರೋಪ ಮಾಡಿದ ರೇಣುಕಾಚಾರ್ಯ
ಸರ್ಕಾರ ಬಿಡುಗಡೆ ಮಾಡಲಿರುವ ಎರಡನೇ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರು ತಾಲೂಕನ್ನು ಕಡ್ಡಾಯವಾಗಿ ಸೇರ್ಪಡೆ ಮಾಡಲಾಗುವುದು. ಅಲ್ಲಿಯವರೆಗೆ ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು ಹಿರಿಯ ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು, ಸಿಎಂ ಮತ್ತು ಡಿಸಿಎಂ ಅವರು ಭರವಸೆ ನೀಡಿದ್ದಾರೆ. ಅಲ್ಲಿಯವರೆಗೂ ಕಾದು ನೋಡೋಣ ಎಂದರು.
ಇದೇ ವೇಳೆ ತಮ್ಮದೇ ಸರ್ಕಾರದ ಆಡಳಿತದ ವಿರುದ್ಧ ತೀಕ್ಷ್ಣವಾದ ಮಾರ್ಮಿಕ ನುಡಿಗಳನ್ನಾಡಿದ ಶಾಸಕರು, ಹಣ್ಣು ಬಿಡುವ ಮರದ ಕೆಳಗೆ ಹೋದರೆ ಮಾತ್ರ ನಮಗೆ ಹಣ್ಣು ಸಿಗುತ್ತದೆ. ಜಾಲಿ ಮರದ ಕೆಳಗೆ ಹೋಗಿ ಹಣ್ಣು ನಿರೀಕ್ಷಿಸಲು ಸಾಧ್ಯವೇ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯಲ್ಲಿದ್ದರೆ ಜಗಳೂರು ಕ್ಷೇತ್ರಕ್ಕೆ ಯಾವುದೇ ನ್ಯಾಯ ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಕಡೆ ಮುಖ ಮಾಡಿದರೆ ಮಾತ್ರ ವಿಶೇಷ ಅನುದಾನದ ಅಡಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ. ಆದ್ದರಿಂದಲೇ ನಾನು ಜಗಳೂರನ್ನು ಕಲ್ಯಾಣ ಕರ್ನಾಟಕ ವಲಯಕ್ಕೆ ಸೇರಿಸಿ ಎಂದು ಒತ್ತಾಯಿಸಿದ್ದು, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಾದಯಾತ್ರೆ ʻಕಹಳೆʼ – ʻಬಳ್ಳಾರಿ ಚಲೋʼಗೆ ಯಡಿಯೂರಪ್ಪ ಚಾಲನೆ!
