ದಾವಣಗೆರೆ: ಗುಟ್ಕಾ ನಿಷೇಧ (Gutka Ban) ಹಾಗೂ ಭದ್ರ ಮೇಲ್ದಂಡೆ ನೀರು ಬಿಡುಗಡೆ ಆದೇಶ ವಿರೋಧಿಸಿ ದಾವಣಗೆರೆಯಲ್ಲಿ ಬಿಜೆಪಿ (BJP) ರೈತ ಮೋರ್ಚಾದಿಂದ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಎಂ.ಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಅರುಣ ಸರ್ಕಲ್, ವಿದ್ಯಾರ್ಥಿ ಭವನ್, ರೇಣುಕಾ ಮಂದಿರ ಸೇರಿದಂತೆ ಹಲವು ಕಡೆ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ವಿವಿಧ ಸಂಘಟನೆಗಳಿಂದ ಸಹ ಬಂದ್‌ಗೆ ಬೆಂಬಲ ಸಿಕ್ಕಿದೆ. ಬೈಕ್ ರ‍್ಯಾಲಿ ಮೂಲಕ ನಗರದಾದ್ಯಂತ ಸಂಚಾರ ಬಂದ್‌ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಡಿಕೆ ಬೆಳೆಗಾರರರು ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರತಿಭಟನೆ – ವಿದ್ಯಾರ್ಥಿಗಳ ಮೇಲಿದ್ದ ಎಲ್ಲಾ ಎಫ್‌ಐಆರ್ ರದ್ದು
ಬಸ್ ಹಾಗೂ ವಾಹನಗಳನ್ನು ತಡೆದು ಬಂದ್‌ಗೆ ಬೆಂಬಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ಬಲವಂತದ ಬಂದ್ ಮಾಡುವಂತಿಲ್ಲ ಎಂದು ಪೊಲೀಸರು ಈ ವೇಳೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಪೊಲೀಸರು ಹಾಗೂ ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆದಿದೆ.

ಪ್ರತಿಭಟನೆ ತೀವ್ರತೆ ಹೆಚ್ಚಾಗುತ್ತಿದ್ದಂತೆ ಎಂ.ಪಿ ರೇಣುಕಾಚಾರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರೇಣುಕಾಚಾರ್ಯ ನಡುವೆ ವಾಗ್ವಾದ ನಡೆದಿದೆ. ಕೈ, ಮೈ ಭಾಗಕ್ಕೆ ಪೊಲೀಸರು ಹಲ್ಲೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಬಂದ್ ಹತ್ತಿಕ್ಕುವ ಪ್ರಯತ್ನ ನಡೆದಿದೆ. ನಮ್ಮ ಕಾರ್ಯಕರ್ತರಿಗೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದಾವಣಗೆರೆ ಬಂದ್ (Davanagere Bandh) ಯಶಸ್ವಿಯಾಗಿದೆ. ಆದರೆ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಗುಟ್ಕಾ ನಿಷೇಧ ಹಿಂಪಡೆಯಬೇಕು, ಅಪ್ಪರ್ ಭದ್ರಾಕ್ಕೆ ನೀರು ಬಿಡುವ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ವಿಧಾನಸೌಧ ಚಲೋ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸೆ. 5ರ ದೆಹಲಿ ಪ್ರತಿಭಟನಾ ಮೆರವಣಿಗೆ ಹಿಂಪಡೆದ ಸಿಜೆಪಿ: ಸುಪ್ರೀಂಗೆ ಮಾಹಿತಿ
