ಬಾಗಲಕೋಟೆ: ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಧಾರಾಕಾರ ಮಳೆಗೆ(Heavy Rain) ಹಳೆಯ ಮನೆಯೊಂದರ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು, ಸಾಕು ಬೆಕ್ಕಿನ ಕಾರಣದಿಂದಾಗಿ ತಂದೆ-ಮಗ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಗಲಕೋಟೆಯ(Bagalkote) ವಲ್ಲಭಬಾಯಿ ವೃತ್ತದ ಬಳಿ ನಡೆದಿದೆ.
ಇಲ್ಲಿನ ನಿವಾಸಿ ಹಾಗೂ ಮಾವಿನ ಹಣ್ಣಿನ ವ್ಯಾಪಾರಿಯಾದ ಶಬ್ಬೀರ್ ಬಾಗವಾನ್ ಮತ್ತು ಅವರ ಮಗ ಅರ್ಬಾಜ್ ಬಾಗವಾನ್ ಅವರ ಜೀವ ಉಳಿಸಿದ ಕೀರ್ತಿ ಈಗ ಅವರ ಮನೆಯ ಸಾಕು (Cat) ಬೆಕ್ಕಿಗೆ ಸಲ್ಲುತ್ತದೆ.
ಘಟನೆ ನಡೆದಿದ್ದು ಹೇಗೆ?
ಮನೆಯಲ್ಲಿ ಶಬ್ಬೀರ್ ಹಾಗೂ ಅವರ ಮಗ ಅರ್ಬಾಜ್ ಇದ್ದಾಗ ಹಳೆಯ ಮನೆಯ ಮೇಲ್ಚಾವಣಿಯಿಂದ ಮಣ್ಣಿನ ತುಕಡಿ ಹಾಗೂ ಸಣ್ಣ ಕಟ್ಟಿಗೆಯ ತುಂಡೊಂದು ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಸಾಕು ಬೆಕ್ಕು ತಕ್ಷಣವೇ ಭಯದಿಂದ ಮನೆಯಿಂದ ಹೊರಗೆ ಓಡಿದೆ. ಅದೇ ಸಮಯಕ್ಕೆ ಬೆಕ್ಕಿಗೆ ಹಸಿವು ಕೂಡ ಆಗಿದ್ದರಿಂದ, ಅದಕ್ಕೆ ಏನಾದರೂ ತಿನ್ನಿಸೋಣ ಎಂದುಕೊಂಡು ಬೆಕ್ಕನ್ನು ಹಿಡಿಯಲು ಶಬ್ಬೀರ್ ಮನೆಯಿಂದ ಹೊರಗೆ ಬಂದಿದ್ದಾರೆ. ತಂದೆಯ ಹಿಂದೆಯೇ ಮಗ ಅರ್ಬಾಜ್ ಕೂಡ ಹೊರಗೆ ಬಂದಿದ್ದಾನೆ.
ತಂದೆ-ಮಗ ಇಬ್ಬರೂ ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆ, ಇಡೀ ಮನೆಯ ಮೇಲ್ಚಾವಣಿ ಭಾರೀ ಸದ್ದಿನೊಂದಿಗೆ ಕುಸಿದು ಬಿದ್ದಿದೆ. ಒಂದು ವೇಳೆ ಬೆಕ್ಕನ್ನು ಹಿಡಿಯುವ ನೆಪದಲ್ಲಿ ಅವರಿಬ್ಬರೂ ಹೊರಗೆ ಬರದೇ ಹೋಗಿದ್ದರೆ, ಅವಶೇಷಗಳ ಅಡಿಯಲ್ಲಿ ಅವರು ಸಿಲುಕುವ ಸಾಧ್ಯತೆ ಇತ್ತು. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ – ಆರೆಂಜ್ ಅಲರ್ಟ್ ಘೋಷಣೆ
“ಮನೆಯ ಮೇಲ್ಚಾವಣಿಯಿಂದ ಮಣ್ಣು ಬಿದ್ದ ತಕ್ಷಣ ಬೆಕ್ಕು ಹೊರಗೆ ಓಡಿ ಹೋಯಿತು. ಅದನ್ನು ಹಿಡಿಯಲು ನಮ್ಮ ತಂದೆ ಹೋದರು, ನಾನು ಅವರ ಹಿಂದೆ ಹೋದೆ. ನಾವು ಹೊರಬರುತ್ತಿದ್ದಂತೆ ಮನೆ ಕುಸಿಯಿತು. ಆ ಬೆಕ್ಕಿನಿಂದಾಗಿ ನಮ್ಮ ಪ್ರಾಣ ಉಳಿಯಿತು, ಇಲ್ಲದಿದ್ದರೆ ನಾವು ಇವತ್ತು ಜೀವಂತವಾಗಿ ಇರುತ್ತಿರಲಿಲ್ಲ” ಎಂದು ಅರ್ಬಾಜ್ ಬಾಗವಾನ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಭಾವುಕರಾಗಿದ್ದಾರೆ.
ಮನೆಯ ಇತರ ಕುಟುಂಬಸ್ಥರು ಮದುವೆ ಸಮಾರಂಭವೊಂದರ ನಿಮಿತ್ತ ವಿಜಯಪುರಕ್ಕೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಇವರಿಬ್ಬರು ಮಾತ್ರ ಇದ್ದು, ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಮೇಲ್ಚಾವಣಿ ಕುಸಿತದ ಭೀಕರತೆಗೆ ಮನೆಯಲ್ಲಿದ್ದ ಪಾತ್ರೆ-ಪಗಡೆಗಳು, ದವಸ ಧಾನ್ಯಗಳು ಸಂಪೂರ್ಣವಾಗಿ ನಾಶವಾಗಿವೆ. ಇದರೊಂದಿಗೆ, ವ್ಯಾಪಾರಕ್ಕಾಗಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳು ಮಣ್ಣಿನ ಪಾಲಾಗಿವೆ.
ಮನೆ ಕಳೆದುಕೊಂಡು, ವ್ಯಾಪಾರದ ಸರಕೂ ನಾಶವಾಗಿ ಬೀದಿಗೆ ಬಿದ್ದಿರುವ ಹಣ್ಣಿನ ವ್ಯಾಪಾರಿ ಶಬ್ಬೀರ್ ಬಾಗವಾನ್ ಅವರು, ತಮಗೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕಣ್ಣೀರು ಹಾಕುತ್ತಾ ಆಗ್ರಹಿಸಿದ್ದಾರೆ.
