ಚಂಡೀಗಢ: ಮಾಜಿ ಒಲಿಂಪಿಯನ್ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ, ಜಲಂಧರ್ ಕಂಟೋನ್ಮೆಂಟ್ ಶಾಸಕ ಪರ್ಗತ್ ಸಿಂಗ್ (Pargat Singh) ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PCC) ಅಧ್ಯಕ್ಷರಾಗಿ ಕಾಂಗ್ರೆಸ್ ನೇಮಕ ಮಾಡಿದೆ. ಅಮರಿಂದರ್ ಸಿಂಗ್ ರಾಜಾ ವಾರಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ನೇಮಕಾತಿ ನಡೆದಿದೆ.
2027ರ ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಈ ಮಹತ್ವದ ನಾಯಕತ್ವ ಬದಲಾವಣೆ ನಡೆದಿದೆ. ಪರ್ಗತ್ ಸಿಂಗ್ ಅವರ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪರ್ಗತ್ ಸಿಂಗ್ ಅವರಿಗೆ ನಿರ್ಗಮಿತ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯ ಕಾಂಗ್ರೆಸ್ನ ಕಾರ್ಯಾಧ್ಯಕ್ಷರು ಹಾಗೂ ವಿವಿಧ ಚುನಾವಣಾ ಸಮಿತಿಗಳ ಅಧ್ಯಕ್ಷರು ಮತ್ತು ಸಹಾಧ್ಯಕ್ಷರು ತಮ್ಮ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಇದನ್ನೂ ಓದಿ: ತಡರಾತ್ರಿ ಭಾರತದ ಗಡಿ ಪ್ರವೇಶಿಸಿದ ಪಾಕ್ ಬಾಲಕಿಯನ್ನು ವಶಕ್ಕೆ ಪಡೆದ ಸೇನೆ
ಒಂದು ದಶಕಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯ:
ಪರ್ಗತ್ ಸಿಂಗ್ ಅವರು ಭಾರತೀಯ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ಆಗಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲ ಪಂಜಾಬ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಅವರು 2012ರಿಂದ ಜಲಂಧರ್ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ; ಪ್ರಧಾನಿ ಮೋದಿಗೆ ಪತ್ರ ಬರೆದ ಖರ್ಗೆ
2012ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳದ ಅಭ್ಯರ್ಥಿಯಾಗಿ ಜಲಂಧರ್ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದ್ದರು. ನಂತರ 2016ರಲ್ಲಿ ಶಿರೋಮಣಿ ಅಕಾಲಿದಳದಿಂದ ಅಮಾನತುಗೊಂಡ ಬಳಿಕ ಪಕ್ಷದೊಂದಿಗಿನ ಸಂಬಂಧ ಕಡಿದುಕೊಂಡರು. ಬಳಿಕ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಸೇರಿದಂತೆ ಹಲವು ನಾಯಕರೊಂದಿಗೆ `ಆವಾಝ್-ಇ-ಪಂಜಾಬ್’ ರಂಗದೊಂದಿಗೆ ಅವರು ಗುರುತಿಸಿಕೊಂಡಿದ್ದರು. ನಂತರ ಕಾಂಗ್ರೆಸ್ ಸೇರ್ಪಡೆಯಾದರು. ಇದನ್ನೂ ಓದಿ: ಧಮ್ ಇದ್ರೆ ಅಜ್ಜಯ್ಯನ ಮೇಲೆ ಆಣೆ ಮಾಡಿ – ಚಲುವರಾಯಸ್ವಾಮಿಗೆ ಸುರೇಶ್ ಗೌಡ ಚಾಲೆಂಜ್
ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಗೆಲುವು:
2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಲಂಧರ್ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿದ ಪರ್ಗತ್ ಸಿಂಗ್ ಗೆಲುವು ಸಾಧಿಸಿದರು. 2022ರ ವಿಧಾನಸಭಾ ಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ ಗೆದ್ದು ತಮ್ಮ ಸ್ಥಾನವನ್ನು ಉಳಿಸಿಕೊಂಡರು. 2021ರಲ್ಲಿ ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿಯೂ ಪರ್ಗತ್ ಸಿಂಗ್ ಕಾರ್ಯನಿರ್ವಹಿಸಿದ್ದರು. ಶಿಕ್ಷಣ, ಉನ್ನತ ಶಿಕ್ಷಣ, ಕ್ರೀಡೆ ಮತ್ತು ಯುವ ವ್ಯವಹಾರಗಳು ಸೇರಿದಂತೆ ಹಲವು ಖಾತೆಗಳ ಜವಾಬ್ದಾರಿ ಅವರಿಗಿತ್ತು. ಇದನ್ನೂ ಓದಿ: ಪ್ರೆಟ್ರೋಲ್ ಬಂಕ್ನಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ದುರ್ಮರಣ

