* ಕರ್ನಾಟಕಕ್ಕೆ 3,705 ಕೋಟಿ ರೂ. ನೆರವು ಬಿಡುಗಡೆಗೆ ಮನವಿ
ನವದೆಹಲಿ: ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಸೆಪ್ಟೆಂಬರ್‌ವರೆಗೆ 58% ಮಳೆ ಕೊರತೆಯಾಗಿದೆ. ವ್ಯಾಪಕ ಬೆಳೆ ಹಾನಿಯಾಗಿ ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟದಲ್ಲಿವೆ. ಕರ್ನಾಟಕಕ್ಕೆ 3,705.30 ಕೋಟಿ ರೂ. NDRF- SDRF ನೆರವು ಬಿಡುಗಡೆ ಮಾಡಿ ಎಂದು ಪ್ರಧಾನಿಗೆ ಖರ್ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್, ಬರಪೀಡಿತ ಹಳ್ಳಿಗಳ ಪರಿಶೀಲನೆ
ರಾಜ್ಯದಲ್ಲಿ ಬರದಿಂದ 18,748.23 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ತಕ್ಷಣ ಕೇಂದ್ರ ತಂಡ ಕಳುಹಿಸಿ ಬರ ಹಾನಿ ಪರಿಶೀಲಿಸಬೇಕು. ಹಳೆಯ 2015-16 ಕೃಷಿ ಗಣತಿ ಬದಲಿಗೆ ನವೀಕೃತ ಭೂಮಿ ದಾಖಲೆ ಆಧರಿಸಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇನ್‌ಪುಟ್ ಸಬ್ಸಿಡಿ ನೀಡಬೇಕು. ಹೆಚ್ಚುವರಿ 11 ತಾಲೂಕುಗಳ ಬರ ಘೋಷಣೆ ಪ್ರಕ್ರಿಯೆ ತ್ವರಿತಗೊಳಿಸಬೇಕು. ಕುಡಿಯುವ ನೀರು ಹಾಗೂ ಪರ್ಯಾಯ ವಿದ್ಯುತ್ ವೆಚ್ಚಕ್ಕೆ ಹೆಚ್ಚಿನ ಕೇಂದ್ರ ನೆರವು ನೀಡುವಂತೆ ಆಗ್ರಹಿಸಿದ್ದಾರೆ.
31 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳ ಸಂಕಷ್ಟ ಗಮನಿಸಿ ರಾಜಕೀಯ ಪರಿಗಣನೆ ಇಲ್ಲದೆ ತುರ್ತಾಗಿ ನೆರವು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದೇ ಮನವಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕಳುಹಿಸಿರುವುದಾಗಿ ಖರ್ಗೆ ಮಾಹಿತಿ ನೀಡಿದ್ದಾರೆ.

