ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ- ಮಳೆಯ ಆರ್ಭಟಕ್ಕೆ ರಸ್ತೆಗೆ ಉರುಳಿಬಿದ್ದಿದ್ದ ಬೇವಿನ ಮರಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ (Koppala) ತಾಲೂಕಿನ ಕಾಮನೂರ ಗ್ರಾಮದ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ
ಮೃತಪಟ್ಟ ಯುವಕನನ್ನು ಕಿರಣ್ ಕರಬಡಗಿ (30) ಎಂದು ಗುರುತಿಸಲಾಗಿದೆ. ಇವರೊಂದಿಗೆ ಬೈಕ್‌ನಲ್ಲಿದ್ದ (Bike) ಮತ್ತೊಬ್ಬ ಸವಾರ ಮಹೇಶ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾನುವಾರ ಬೆಳಗಿನ ಜಾವ ಸುಮಾರು 5 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಯುವಕರಿಬ್ಬರು ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಗೆ ಕೆಲಸ ನಿಮಿತ್ತ ಹೊರಟಿದ್ದರು.
ಕಿರಣ್ ಮತ್ತು ಮಹೇಶ್ ಇಬ್ಬರೂ ಮೊದಲು ಬೈಕ್ ಮೂಲಕ ಕಾಮನೂರಿನಿಂದ ಗಿಣಿಗೇರಿಗೆ ತಲುಪಬೇಕಿತ್ತು. ಅಲ್ಲಿಂದ ಮುಂದೆ ಮರಿಯಮ್ಮನಹಳ್ಳಿಗೆ ತೆರಳುವ ಕೃಷರ್ (Crusher) ವಾಹನವೊಂದನ್ನು ಹತ್ತಿ ಕೆಲಸಕ್ಕೆ ಹೋಗಲು ಯೋಜಿಸಿದ್ದರು. ಇದನ್ನೂ ಓದಿ: ರಾಯಚೂರಿನಲ್ಲಿ ಧಾರಾಕಾರ ಮಳೆ – ಮಂತ್ರಾಲಯದಲ್ಲಿ ಕಲ್ಯಾಣ ಮಂಟಪ ತೆರೆದು ಭಕ್ತರಿಗೆ ವಸತಿ
ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಕಾಮನೂರ ಬಳಿ ಬೃಹತ್ ಬೇವಿನ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಬೆಳಗಿನ ಜಾವ ಇನ್ನು ಸರಿಯಾಗಿ ಬೆಳಕು ಮೂಡದ ಕಾರಣ ಹಾಗೂ ರಸ್ತೆಯಲ್ಲಿದ್ದ ಮರ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ, ಇವರ ಬೈಕ್ ನೇರವಾಗಿ ಹೋಗಿ ಮರಕ್ಕೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು ಕಿರಣ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮಳೆ | ಇಂದು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
