ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ (CJP) ಪ್ರತಿಭಟನೆ ಹಾಗೂ ಧರಣಿಗಳಿಗೆ ಕರ್ನಾಟಕ ಸರ್ಕಾರದಿಂದಲೇ (Karnataka Government) ಹಣ ರವಾನೆಯಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಪಬ್ಲಿಕ್ ಟಿವಿಯಲ್ಲಿ(PUBLiC TV) ಪ್ರಸಾರವಾದ ವಿಡಿಯೋ ತುಣುಕನ್ನು ಉಲ್ಲೇಖಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿನ್ನೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೇ ಎಂದು ಹೇಳಿದ್ದಾರೆ. ಏನು ಬೇಕಾದರೂ ಗಲಾಟೆ ಮಾಡಿ, ನಾವು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದರು.
ತಮ್ಮ ಪರವಾಗಿ, ತಮಗೆ ಬೇಕಾದಂತೆ ಕಾನೂನನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದರೆ ಸರ್ಕಾರ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಹೇಳುವ ಮೂಲಕ ಹೋರಾಟಗಾರರಿಗೆ ಯಾರೂ ಹೆದರಬೇಡಿ ಎಂದು ಅಭಯ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂಓದಿ: ಸಿದ್ರಾಮಯ್ಯ ವಿರುದ್ಧ ಸ್ಟಿಂಗ್ ಆರೋಪ ಕೇಸ್ – ʻಕರ್ನಾಟಕ ಹನಿಟ್ರ್ಯಾಪ್ʼ ಯೂಟ್ಯೂಬ್ ಸಬ್ಸ್ಕ್ರೈಬ್ ಆದ 54 ಜನರ ವಿಚಾರಣೆಗೆ ತಯಾರಿ!
ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಧರಣಿ, ಪ್ರತಿಭಟನೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ಕರ್ನಾಟಕದಿಂದ ಹಣ ರವಾನೆಯಾಗುತ್ತಿದೆ. ನಮ್ಮ ರಾಜ್ಯದ ಬೊಕ್ಕಸದ ಹಣವನ್ನು ಲೂಟಿ ಮಾಡಿ, ದೇಶದಲ್ಲಿ ಅಭದ್ರತೆ ಹಾಗೂ ಅಶಾಂತಿ ಸೃಷ್ಟಿಸಲು ಇಲ್ಲಿಂದ ದೆಹಲಿಗೆ ಹಣ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಪದೇ ಪದೇ ‘ಕಾಲವೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ’ ಎಂದು ಹೇಳುತ್ತಿರುತ್ತಾರೆ. ಖಂಡಿತವಾಗಿಯೂ ಕಾಲವೇ ಎಲ್ಲವನ್ನೂ ನಿರ್ಧರಿಸಲಿದ್ದು, ಈ ಎಲ್ಲಾ ಅಕ್ರಮ ಮತ್ತು ಒಳಸಂಚುಗಳು ಸದ್ಯದಲ್ಲೇ ಜನರ ಮುಂದೆ ಬಯಲಾಗಲಿವೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.


