– ಫ್ರೇಮ್ ವರ್ಕ್ ಅಗ್ರಿಮೆಂಟ್ ಪ್ರಕಾರ ನೈಸ್ ರಸ್ತೆಯಲ್ಲಿ ಟೋಲ್ ನಿರ್ಮಾಣ ಮಾಡೋಹಾಗೇ ಇಲ್ಲ
ಹಾಸನ: ನೈಸ್ ರಸ್ತೆ (NICE Road) ದೇವೇಗೌಡರ ಕೂಸು ಅಂತಾರೆ, ಹೌದಪ್ಪ. ಅದು ದೇವೇಗೌಡರ ಕೂಸೇ, ದೇವೇಗೌಡರು ಇದ್ದ 18 ತಿಂಗಳಿನಲ್ಲಿ ಎಂಓಯುಗೆ ಸಹಿ ಹಾಕಿ ಹೋದ್ರು. ಆಮೇಲೆ ಏನೇನು ನಡೀತು ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ದೆಹಲಿಗೆ ಹೋದಮೇಲೆ ಬಂದ ಸರ್ಕಾರಗಳು ಆ ಕಂಪನಿ ಮಾಲೀಕನಿಗೆ ರೆಡ್ ಕಾರ್ಪೆಟ್ ಹಾಕಿ, ಜೀ ಹುಸೂರ್ ಮಾಡ್ಕಂಡು, ಉತ್ತಮವಾದ ಯೋಜನೆ ತರಬೇಕು ಅಂತ ಇದ್ದಿದ್ದನ್ನ ಲೂಟಿ ಹೊಡೆಯುವ ಕೆಲಸಕ್ಕೆ ಬಳಸಿಕೊಂಡರು. ಅದರಲ್ಲಿ ಪ್ರಮುಖ ಕಾರ್ಯಕರ್ತರು ನೀವೇ ಇದ್ದೀರಿ, ಬಿಎಂಐಸಿಪಿ ಎಂಬ ಅಥಾರಿಟಿ ಮಾಡಿ, ಆ ಅಥಾರಿಟಿ ಚೇರ್‌ಮೆನ್ ನೀವೇ ಆದ್ರಿ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಇದ್ದಾಗ, ನೀವು ಮಂತ್ರಿ ಇದ್ದಾಗ ಮಾಡಿಕೊಟ್ರಿ. ಸರ್ಕಾರದ ಜುಟ್ಟು, ಜನಿವಾರ ಎಲ್ಲಾ ಅವರ ಕೈಯಲ್ಲೇ ಕೊಟ್ಟರು. ಅಧಿಕಾರಿಗಳು ಅವರಿಗೆ ಬೇಕಾದ ರೀತಿಯಲ್ಲಿ ನ್ಯಾಯಾಲಯಗಳಿಗೆ ತಪ್ಪು ವರದಿಗಳನ್ನ ಕೊಡಲು ನೀವೆಲ್ಲಾ ಚಿತಾವಣೆ ನಡೆಸಿ ರೈತರನ್ನು ಬೀದಿಗೆ ಹಾಕಿದ್ರಿ ಎಂದು ವಾಗ್ದಾಳಿ ನಡೆಸಿದರು.
20 ವರ್ಷ ಆದರೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ಆ ರೈತರ ಭೂಮಿ ತಗೊಂಡು ಎಲ್ಲೆಲ್ಲಿ ಜಂಟಿ ಯೋಜನೆ? ಎಲ್ಲೆಲ್ಲಿ ಮಾರಾಟ ಮಾಡಿದ್ದೀರಿ? ಇದರ ಸತ್ಯಾಂಶಗಳು ನಿಮ್ಮ ಸರ್ಕಾರದ ಮುಂದೆ ಇಲ್ಲವಾ? ಏಕೆ ಜಾಣ ಮೌನಕ್ಕೆ ಶರಣಾಗಿದ್ದೀರಿ? ಆ ಕಂಪನಿ ಕೆಲಸ ಮಾಡೋದು ಬಿಟ್ಟು ದಿನ ಕೋರ್ಟ್‌ನಲ್ಲಿ ಸರ್ಕಾರ ಎಳೆತಂದು ಮುಖಭಂಗ ಮಾಡಲು ನೀವೆಲ್ಲಾ ಸೇರಿ ನಡೆಸಿದ್ದಾರೆ. ಸರ್ಕಾರ, ನಾಡಿನ ಜನತೆಯ ಗೌರವ ಉಳಿಸಲಿಲ್ಲ. ಅವರ ಜೊತೆ ಸೇರಿ ಏನೇನ್ ಮಾಡಿದ್ರಿ ಎಂದು ಪ್ರಶ್ನಿಸಿದರು.
ಟೋಲ್ ಮಾಡುವ ಹಾಗೇ ಇಲ್ಲ
ನೈಸ್ ಯೋಜನೆಯಲ್ಲಿ ಲೂಟಿ ಆಗಿದೆ. ಫ್ರೇಮ್ ವರ್ಕ್ ಅಗ್ರಿಮೆಂಟ್ ಪ್ರಕಾರ ಟೋಲ್‌ನ ನಿರ್ಮಾಣ ಮಾಡುವ ಹಾಗೇ ಇಲ್ಲ, ಕಾನೂನುಬಾಹಿರವಾಗಿ ಟೋಲ್ ಕಲೆಕ್ಟ್ ಮಾಡಲು ಅವಕಾಶ ಕೊಟ್ಟಿದ್ದೀರಿ. ವರ್ಷದಿಂದ ವರ್ಷಕ್ಕೆ ಇಷ್ಟ ಬಂದಂತೆ ಟೋಲ್ ರೇಟ್ ಹೆಚ್ಚಿಸಿದ್ದಾರೆ. ಸರ್ಕಾರದ ಅನುಮತಿ ತೆಗೆದುಕೊಳ್ಳಲಿಲ್ಲ. ವಾಹನ ಮಾಲೀಕರಿಂದ ಶುಲ್ಕ ವಸೂಲು ಮಾಡುತ್ತಿರುವುದು ತಪ್ಪು. ಸುಮಾರು 2,000 ಕೋಟಿ ಕಲೆಕ್ಷನ್ ಮಾಡಿದ್ದಾರೆ ಎಂದರು.
111 ಕಿಲೋಮೀಟರ್ ರಸ್ತೆಗೆ ಬರೀ 5 ಕಿಲೋಮೀಟರ್ ರಸ್ತೆ ಮಾಡಿದ್ದಾನೆ, ಅವನು ಟೋಲ್ ಕಲೆಕ್ಟ್ ಮಾಡುವ ಹಾಗೇ ಇಲ್ಲ. ಆದರೂ ಅನುಮತಿ ಕೊಟ್ಟಿದ್ದೀರಿ. ಕೋರ್ಟ್ ಹೆಸರಿನಲ್ಲಿ ಬಡ ಜನರ ಜೀವನ ಹಾಳು ಮಾಡಿದ್ದೀರಿ. ಕೋರ್ಟ್ ತೀರ್ಪಿನ ಆಧಾರದ ಮೇಲೆ ನಾನು ಆ ರಸ್ತೆಯಲ್ಲಿ ಓಡಾಡುವ ಜನರಿಗೆ ಟೋಲ್ ಕಟ್ಟಬೇಡಿ ಎಂದು ಹೇಳಿದ್ದೇನೆ. ಸರ್ಕಾರವೇ ನೈಸ್ ಮಾಲೀಕನ ಜೊತೆ ಶಾಮೀಲಾಗಿದೆ. ಯಾರು ಅನ್ಯತಾ ಭಾವಿಸಬೇಕಿಲ್ಲ. ಅನ್ಯಾಯ ಆದಾಗ ಜನತೆ ಮುಂದೆ ತರಬೇಕಾದದ್ದು ನನ್ನ ಕರ್ತವ್ಯ. ಈ ವಿಷಯದಲ್ಲಿ ನಾನು ಹುಡುಗಾಟ ಮಾಡಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡಲು ಹೇಳಿಲ್ಲ. ಸಾರ್ವಜನಿಕರಿಂದ ಹಣ ಕಿತ್ತುಕೊಳ್ಳುತ್ತಿದ್ದಾರೆ ಅವರಿಗೆ ಬೆಂಬಲ ಕೊಡಬೇಡಿ ಎಂದು ಹೇಳಿದ್ದೇನೆ ಸ್ಪಷ್ಟಪಡಿಸಿದರು.

