ಹಾಸನ: 2028 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷಗಳಿಗೂ ಹೆಚ್ಚು ಕಾಲ ಬಾಕಿಯಿರುವಾಗಲೇ, ಹಾಸನ (Hassana) ಜಿಲ್ಲೆಯ ರಾಜಕೀಯ ಅಂಗಳದಲ್ಲಿ ಮರುಧ್ರುವೀಕರಣದ ಸುಳಿವುಗಳು ಸಿಗುತ್ತಿವೆ.
ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ(Preetham Gowda) ಅವರು ಕಾಂಗ್ರೆಸ್ ನಾಯಕರೊಂದಿಗೆ ತೋರುತ್ತಿರುವ ಆತ್ಮೀಯತೆ ಮತ್ತು ಸಂಸದ ಶ್ರೇಯಸ್ ಪಟೇಲ್(Shreyas Patel) ವರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಜಿಲ್ಲೆಯಲ್ಲಿ ಹೊಸ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (HD Devegowda0 ಕುಟುಂಬದ ರಾಜಕೀಯ ಕಡುವೈರಿಯಾಗಿರುವ ಪ್ರೀತಂ ಗೌಡ, 2023 ರ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಕೆಲ ಕಾಲ ಸೈಲೆಂಟ್ ಆಗಿದ್ದರು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೇಯಸ್ ಪಟೇಲ್ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದರು ಎಂಬ ಮಾತುಗಳಿವೆ.
ಇತ್ತೀಚೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಪ್ರಮುಖ ನಾಯಕರ ಜೊತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದು ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳಿಗೆ ಪುಷ್ಟಿ ನೀಡಿದೆ.
ಹಾಸನದ ಪೆಂಡಾಲ್ ಗಣಪತಿ ವಿಸರ್ಜನೆ ಹಾಗೂ ಹೊಳೆನರಸೀಪುರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಸಂಸದ ಶ್ರೇಯಸ್ ಪಟೇಲ್ ಮತ್ತು ಪ್ರೀತಂ ಗೌಡ ಒಂದೇ ವೇದಿಕೆ ಹಂಚಿಕೊಂಡಿದ್ದರು. ಮೆರವಣಿಗೆಯ ವೇಳೆ ಇಬ್ಬರೂ ನಾಯಕರು ಒಟ್ಟಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ದು, ಬೆಂಬಲಿಗರು ಇಬ್ಬರನ್ನೂ ಹೆಗಲ ಮೇಲೆ ಹೊತ್ತು ಜೈಕಾರ ಹಾಕಿದ್ದರು. ಇದನ್ನೂ ಓದಿ: ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗೆ E-KYC ಕಡ್ಡಾಯ – ಆಗಸ್ಟ್ 16ಕ್ಕೆ ಡೆಡ್‌ಲೈನ್!

ರವಿವಾರ ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಪ್ರೀತಂ ಗೌಡ ಅವರನ್ನು ಬಹಿರಂಗವಾಗಿಯೇ ಹಾಡಿ ಹೊಗಳಿದ್ದಾರೆ.
ನನಗೆ ಇಂದು ಪಕ್ಷದ ಪ್ರಮುಖ ಸಭೆ ಇತ್ತು. ಆದರೆ ಪ್ರೀತಂ ಅಣ್ಣ ಕರೆ ಮಾಡಿ ‘ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು, ನಾವಿಬ್ಬರೂ ಹೋಗಬೇಕು’ ಎಂದಿದ್ದಕ್ಕೆ ಸಂತೋಷದಿಂದ ಬಂದಿದ್ದೇನೆ. ಒಂದು ಅವಧಿಗೆ ಶಾಸಕರಾಗಿದ್ದರೂ ಹಾಸನವನ್ನು ಇಷ್ಟು ಸುಂದರ ನಗರವನ್ನಾಗಿ ಹಾಗೂ ಸ್ವಚ್ಛವಾಗಿ ಅಭಿವೃದ್ಧಿ ಮಾಡಬಹುದು ಎಂದು ತೋರಿಸಿಕೊಟ್ಟವರು ಪ್ರೀತಂ ಗೌಡ. ಅವರು ಎಲ್ಲ ಸಮಾಜಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಪಕ್ಷ ಯಾವುದೇ ಇರಲಿ, ಒಬ್ಬ ಸಹೋದರನಾಗಿ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೇಯಸ್ ಪಟೇಲ್ ಪಕ್ಕದಲ್ಲೇ ಕುಳಿತು ಪಿಸುಗುಟ್ಟುತ್ತಾ ಆತ್ಮೀಯತೆ ತೋರಿದ ಪ್ರೀತಂ ಗೌಡ, ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ದಲಿತ ಸಮಾಜ ನೂರಾರು ವರ್ಷ ಮೀಸಲಾತಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದಕ್ಕೆ ಮಡಿವಂತಿಕೆ ಅಥವಾ ಅಂಜಿಕೆ ಅಗತ್ಯವಿಲ್ಲ. 5 ವರ್ಷಗಳ ಸ್ವತಂತ್ರ ಭಾರತದಲ್ಲಿ ಶತಮಾನಗಳ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನಕ್ಕೆ ಶಕ್ತಿ ತುಂಬುವ ಕೆಲಸವನ್ನು ಈ ವೇದಿಕೆ ಮೇಲಿರುವವರು ಮಾಡಲಿದ್ದಾರೆ. ಸಂಸದ ಶ್ರೇಯಸ್ ಪಟೇಲ್ ನಿಮ್ಮೊಂದಿಗೆ ಸದಾ ಇರುತ್ತಾರೆ. ನನ್ನ ಸಹೋದರನಾಗಿ ಅವರ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ಪಕ್ಷ ಮೀರಿ ಅವರು ನಿಮ್ಮೊಂದಿಗೆ ಇರುತ್ತಾರೆ, ನಾನು ಅವರಿಗೆ ಸಾಥ್ ನೀಡುತ್ತೇನೆ ಎಂದು ಹೇಳಿದರು.
ಇಬ್ಬರೂ ನಾಯಕರು ಮೇಲ್ನೋಟಕ್ಕೆ ಪಕ್ಷಾತೀತ ಸ್ನೇಹ ಎಂದು ಹೇಳುತ್ತಿದ್ದರೂ, ಹಾಸನದ ಜೆಡಿಎಸ್ ವಿರುದ್ಧ ಬಲವಾದ ಪರ್ಯಾಯ ಶಕ್ತಿಯನ್ನು ರೂಪಿಸಲು ಈ ಜೋಡಿ ಕೈಜೋಡಿಸುತ್ತಿದೆ ಎನ್ನುವ ವಿಶ್ಲೇಷಣೆ ಕೇಳಿ ಬರುತ್ತಿದೆ. ದೇವೇಗೌಡರ ಕುಟುಂಬದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಪ್ರೀತಂಗೌಡ ಮತ್ತು ಶ್ರೇಯಸ್ ಪಟೇಲ್ ಒಗ್ಗೂಡುತ್ತಿರುವುದು ಮುಂದಿನ ದಿನಗಳಲ್ಲಿ ಹಾಸನ ಜಿಲ್ಲಾ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಹಾದಿಮಾಡಿಕೊಡಬಹುದು.

