ರೊಹ್ಟಕ್: ಹೈದರಾಬಾದ್ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ತಲ್ಲಣಿಸಿದ ಬಳಿಕವೂ ರೇಪ್ ಕೇಸ್ ಗಳು ಕಡಿಮೆಯಾಗಿಲ್ಲ. ಆ ದುರುಂತದ ಬಳಿಕ ದೇಶದಲ್ಲಿ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ.
ಇದೇ ರೀತಿ ಹರ್ಯಾಣದಲ್ಲಿ ತನ್ನ 9 ವರ್ಷದ ಮಗಳ ಮೇಲೆಯೇ ತಂದೆಯೊಬ್ಬ ಅತ್ಯಾಚಾರವೆಸಗುವ ಮೂಲಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ರೇಪ್ ನಂತರ ಬಾಲಕಿ ಸ್ಥಳೀಯ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಕುಟುಂಬದ ನಾಲ್ವರು ಮಕ್ಕಳಲ್ಲಿ ಬಾಲಕಿ ದೊಡ್ಡವಳಾಗಿದ್ದಾಳೆ. ಕೆಲಸ ಅರಸಿಕೊಂಡು ಇಡೀ ಕುಟುಂಬ ಹರ್ಯಾಣಕ್ಕೆ ವಲಸೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನಂತೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮನೆಯಲ್ಲಿ ಪತಿ-ಪತ್ನಿ ನಡುವೆ ಪ್ರತಿ ದಿನ ಜಗಳ ನಡೆಯುತ್ತಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ದಿನವಿಡೀ ತಾಯಿ ಜೊತೆ ಇರುವ ಬಾಲಕಿ ರಾತ್ರಿ ಹೊತ್ತು ತನ್ನ ತಂದೆಯ ಪಕ್ಕದಲ್ಲಿ ಮಲಗುತ್ತಾಳೆ. ಸೋಮವಾರ ಬಾಲಕಿಗೆ ಏಕಾಏಕಿ ಅನಾರೋಗ್ಯ ಕಾಡಿದೆ. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಮಗಳು ತೀರಿಕೊಂಡ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಇತ್ತ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬುದಾಗಿ ವರದಿಯಾಗಿದೆ.