ಬಳ್ಳಾರಿ: ಗಂಡ ಹಾಗೂ ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬಳು (House Wife) ಡೆತ್ ನೋಟ್ ಬರೆದು ನೇಣಿಗೆ ಶರಣಾಗಿರುವ ಘಟನೆ ಬಳ್ಳಾರಿ (Ballari) ಜಿಲ್ಲೆಯ ಕಂಪ್ಲಿ (Kampli) ಪಟ್ಟಣದಲ್ಲಿ ನಡೆದಿದೆ.
ಐಶ್ವರ್ಯ (24) ನೇಣಿಗೆ ಶರಣಾದ ಗೃಹಿಣಿ. ಪ್ರಕರಣ ಸಂಬಂಧ ಪತಿ ಪಶುಸಂಗೋಪನಾ ಇಲಾಖೆ ವೈದ್ಯ ಪ್ರದೀಪ್ ಕುಮಾರ್ ಹಾಗೂ ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಐಶ್ವರ್ಯಳನ್ನು ಪ್ರದೀಪ್ ಕುಮಾರ್ ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ನಂತರ ಪತಿ ಹಾಗೂ ಅತ್ತೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೂ ಪತ್ನಿಯ ಬೆಂಬಲಕ್ಕೆ ಪತಿ ನಿಲ್ಲುತ್ತಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ – ಆರ್‌ಸಿಸಿ ಕೋಚಿಂಗ್ ಸೆಂಟರ್ ಮಾಲೀಕ ಅರೆಸ್ಟ್

ಮಾನಸಿಕ ಹಿಂಸೆಯಿಂದ ಬೇಸತ್ತ ಐಶ್ವರ್ಯ, “ಗಂಡನನ್ನು ಬಿಟ್ಟು ಇರುವುದಕ್ಕೆ ಆಗುವುದಿಲ್ಲ. ಆದರೆ ಶಾಶ್ವತವಾಗಿ ತವರು ಮನೆಯಲ್ಲೂ ಇರಲಾಗುವುದಿಲ್ಲ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ. ಗಂಡನ ಮನೆಯಿಂದ ತವರು ಮನೆಗೆ ಬಂದ ಬಳಿಕ ಗಂಡ ಹಾಗೂ ಅತ್ತೆಯ ಕಿರುಕುಳದ ಬಗ್ಗೆ ಡೆತ್‌ನೋಟ್ ಬರೆದು ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಮೃತ ಐಶ್ವರ್ಯ ತನ್ನ ಮೇಲೆ ನಡೆಯುತ್ತಿದ್ದ ಕಿರುಕುಳದ ಬಗ್ಗೆ ತಂದೆ-ತಾಯಿಯ ಮುಂದೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾಳೆ. ಗಂಡನ ಮನೆಯಲ್ಲಿ ಮಾತ್ರ ಅಲ್ಲದೇ, ತವರು ಮನೆಗೆ ಬಂದಾಗಲೂ ಕಿರುಕುಳ ಕೊಟ್ತಿದ್ದ ಆರೋಪಿ ಪ್ರದೀಪ್ ಕುಮಾರ್ ಐಶ್ವರ್ಯಳನ್ನ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ ಆಕೆಯ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸುತ್ತಿದ್ದ ಎಂದು ಮೃತಳ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಂಪ್ಲಿ ಪೊಲೀಸರು ಪತಿ ಪ್ರದೀಪ್ ಕುಮಾರ್ ಹಾಗೂ ಆತನ ತಾಯಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

