– ರೈತರ ಮೇಲೆ ದೌರ್ಜನ್ಯ ಮಾಡಿದ ಪೊಲೀಸರ ಮೇಲೆ ಕ್ರಮ ಆಗಬೇಕು, ಇಲ್ಲವಾದ್ರೆ 10 ಸಾವಿರ ಜನ ಸೇರಿಸಿ ಹೋರಾಟದ ಎಚ್ಚರಿಕೆ
ರಾಮನಗರ: ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂಮಿ ನೀಡಲು ನಿರಾಕರಿಸುತ್ತಿರುವ ರೈತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಭಟನಾನಿರತ ರೈತರಿಗೆ ಬಾಳೆಹಣ್ಣು ತಿನ್ನಿಸಿ ಉಪವಾಸ ಅಂತ್ಯಗೊಳಿಸಿದರು.
ಬಿಡದಿ ರೈತರ ಹೋರಾಟಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಸಾಥ್ ಕೊಟ್ಟರು. ಪ್ರತಿಭಟನಾನಿರತ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಭೇಟಿ ಮಾಡಿದರು. ಕಣ್ಣೀರು ಹಾಕಿದ ರೈತ ಮಹಿಳೆಯರನ್ನು ಸಮಾಧಾನ ಮಾಡಿದರು. ಅಲ್ಲದೆ, ನಿನ್ನೆ ರೈತರ ಮೇಲೆ ದಬ್ಬಾಳಿಕೆ ಮಾಡಿದ ಪೊಲೀಸರು ಸಸ್ಪೆಂಡ್ ಆಗ್ಬೇಕು ಅಂತ ಎಸ್‌ಪಿ ರೋಹನ್ ಜಗದೀಶ್ ವಿರುದ್ಧ ಗುಡುಗಿದರು. ಐಜಿ ಗಿರೀಶ್‌ಗೆ ಕಾಲ್ ಮಾಡಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಉಪವಾಸ ನಿರತ ರೈತರಿಗೆ ಬಾಳೆಹಣ್ಣು ತಿನ್ನಿಸಿ ಉಪವಾಸ ಅಂತ್ಯಗೊಳಿಸಿದರು.
ಇನ್ನು, ಭೈರಮಂಗಲ ಗ್ರಾ.ಪಂ ವ್ಯಾಪ್ತಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿಭಟಿಸುತ್ತಿದ್ದ ರೈತ ಮಹಿಳೆಯರನ್ನು ಪೊಲೀಸರು ಎಳೆದೊಯ್ದಿದ್ದರು. ಹಲವು ರೈತರನ್ನು ವಶಕ್ಕೆ ಪಡೆದಿದ್ದರು. ಹೀಗೆ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಚನ್ನಪಟ್ಟಣ ಪೊಲೀಸ್ ಭವನದಲ್ಲಿ ಇರಿಸಿದರು. ಇದನ್ನ ಖಂಡಿಸಿ ಚನ್ನಪಟ್ಟಣದಲ್ಲೂ ರೈತ ಸಂಘಟನೆಗಳು ಹೋರಾಟಕ್ಕೆ ಧುಮುಕಿವೆ.
ಚನ್ನಪಟ್ಟಣದ ಗಾಂಧಿ ವೃತ್ತದ ಬಳಿ ಜಮಾಯಿಸಿದ ನೂರಾರು ರೈತರು, ಹಳೇ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ರಸ್ತೆ ತಡೆ ನಡೆಸಿದರು. ಮುಖ್ಯಮಂತ್ರಿ ಡಿಕೆಶಿ ಹಾಗೂ ಸಚಿವ ಹೆಚ್.ಸಿ.ಬಾಲಕೃಷ್ಣ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಪೊಲೀಸರು ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ಘೋಷಣೆ ಕೂಗಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ಡಿವೈಎಸ್ಪಿ ಗಿರಿ, ರಸ್ತೆ ತೆರವುಗೊಳಿಸುವಂತೆ ತಾಕೀತು ಮಾಡಿದರು. ಈ ವೇಳೆ ರೈತ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

