ಹೈದರಾಬಾದ್: ಬಾಂಗ್ಲಾದೇಶದಿಂದ (Bangladesh) ವಿದೇಶಿ ಮೂಲದ ಚಿನ್ನವನ್ನು ಕಳ್ಳಸಾಗಣೆ ಮಾಡಿ, ಕೋಲ್ಕತ್ತಾ ಮೂಲಕ ಹೈದರಾಬಾದ್ಗೆ (Hyderabad) ಸಾಗಿಸುತ್ತಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಸುಮಾರು 3.1 ಕೆಜಿ ಚಿನ್ನ ಹಾಗೂ ವಿದೇಶಿ ಕರೆನ್ಸಿ ಸೇರಿದಂತೆ ಒಟ್ಟು 5.84 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬಾಂಗ್ಲಾದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ತಂಡವೊಂದರ ಬಗ್ಗೆ ಖಚಿತ ಮಾಹಿತಿ ಪಡೆದ ಡಿಆರ್ಐನ ಹೈದರಾಬಾದ್ ವಲಯ ಘಟಕ ಹಾಗೂ ವಿಜಯವಾಡ ಪ್ರಾದೇಶಿಕ ಘಟಕದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಈ ತಂಡವು ಬಾಂಗ್ಲಾದೇಶದಿಂದ ಚಿನ್ನವನ್ನು ತಂದು, ಕೋಲ್ಕತ್ತಾ ಮೂಲಕ ಹೈದರಾಬಾದ್ಗೆ ಸಾಗಿಸಿ ಮಾರಾಟ ಮಾಡುತ್ತಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ವಿಜಯೆಂದ್ರ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ: ಯತ್ನಾಳ್
ಈ ಮಾಹಿತಿಯ ಆಧಾರದ ಮೇಲೆ ವಿಜಯವಾಡದ ಹೊರವಲಯದಲ್ಲಿ ಸ್ಕಾರ್ಪಿಯೋ ವಾಹನವನ್ನು ಅಧಿಕಾರಿಗಳು ತಡೆದು ತಪಾಸಣೆ ನಡೆಸಿದರು. ಈ ವೇಳೆ ವಾಹನದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ರಹಸ್ಯ ಜಾಗದಲ್ಲಿ ಅಡಗಿಸಿಟ್ಟಿದ್ದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ವಾಹನದಲ್ಲಿದ್ದ ಇಬ್ಬರನ್ನು ವಿಚಾರಣೆ ನಡೆಸಿದಾಗ, ವಿಜಯವಾಡದ ಹೊರವಲಯದಲ್ಲಿ ಕಳ್ಳಸಾಗಣೆ ಮಾಡಿದ್ದ ಚಿನ್ನವನ್ನು ತಲುಪಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ವಾಹನದಲ್ಲಿ ಪತ್ತೆಯಾದ ವಿದೇಶಿ ಕರೆನ್ಸಿಯು ಚಿನ್ನ ಮಾರಾಟದಿಂದ ಬಂದ ಹಣದ ಭಾಗವಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ-ಯತ್ನಾಳ ಭೇಟಿ ವಿಚಾರದಲ್ಲಿ ವಿಶೇಷ ಏನೂ ಇಲ್ಲ: ಸತೀಶ್ ಜಾರಕಿಹೊಳಿ
ವಿಚಾರಣೆ ವೇಳೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಹೈದರಾಬಾದ್ಗೆ ಸಾರ್ವಜನಿಕ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಇನ್ನೂ ಮೂವರು ಶಂಕಿತ ಸಾಗಣೆದಾರರನ್ನು ಅಧಿಕಾರಿಗಳು ಪತ್ತೆಹಚ್ಚಿದರು. ಟೋಲ್ಪ್ಲಾಜಾ ಬಳಿ ಬಸ್ ತಡೆದು ತಪಾಸಣೆ ನಡೆಸಿದಾಗ, ಮೂವರ ಬಳಿಯೂ ವಿದೇಶಿ ಮೂಲದ ಚಿನ್ನದ ಬಾರ್ಗಳು ಪತ್ತೆಯಾಗಿವೆ. ಇದನ್ನೂ ಓದಿ: ಮೈಸೂರು ದಸರಾದಲ್ಲಿ ವಿದೇಶಿ ಗಣ್ಯರನ್ನು ಸ್ವಾಗತಿಸಿದ ಸಚಿವ ರಾಯರೆಡ್ಡಿ
ಮೂವರು ಆರೋಪಿಗಳು ತಮ್ಮ ಸೊಂಟಕ್ಕೆ ಕಟ್ಟಿಕೊಂಡಿದ್ದ ಚೀಲದಲ್ಲಿ ಚಿನ್ನದ ಬಾರ್ಗಳನ್ನು ಅಡಗಿಸಿಟ್ಟಿದ್ದರು. ಒಟ್ಟು 3,147.1 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ 60,000 ಅಮೆರಿಕನ್ ಡಾಲರ್ ಹಾಗೂ 21,500 ಯೂರೋ ಮೌಲ್ಯದ ವಿದೇಶಿ ಕರೆನ್ಸಿಯನ್ನೂ ಜಪ್ತಿ ಮಾಡಲಾಗಿದೆ. ಜಪ್ತಿಯಾದ ಚಿನ್ನ ಮತ್ತು ವಿದೇಶಿ ಕರೆನ್ಸಿಯ ಒಟ್ಟು ಮೌಲ್ಯ 5.84 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ದಸರಾ ಮೆರವಣಿಗೆಗೆ ಚಾಲನೆ – ಮೈಸೂರು ಪೇಟ ಧರಿಸಿ ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ
ಕಳ್ಳಸಾಗಣೆ ಮಾಡಲಾದ ಚಿನ್ನವನ್ನು ಸಂಗ್ರಹಿಸುವುದು ಹಾಗೂ ಸಾಗಿಸುವುದರಲ್ಲಿ ಭಾಗಿಯಾದ ಐವರು ಆರೋಪಿಗಳನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಅಂತರರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಡಿಆರ್ಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: 100 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್ – ಇಬ್ಬರು ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ!
