ವಾಷಿಂಗ್ಟನ್: ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಯುಎಸ್ ಫೆಡರಲ್ ರಿಸರ್ವ್ (US Fed) ತನ್ನ ಮುಂದಿನ ಪ್ರಮುಖ ವಿತ್ತೀಯ ನೀತಿ ಮತ್ತು ಆರ್ಥಿಕ ಕಾರ್ಯತಂತ್ರಗಳ ಪರಿಶೀಲನೆಗಾಗಿ ರಚಿಸಿರುವ ಅತ್ಯಂತ ಉನ್ನತ ಮಟ್ಟದ ಕಾರ್ಯಪಡೆಗಳಿಗೆ (Task Forces) ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ರಘುರಾಮ್ ರಾಜನ್, ಪ್ರಖ್ಯಾತ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿ, ಆಡಳಿತ ರಂಗದ ತಜ್ಞೆ ಆಶಾ ಶರ್ಮಾ ಅವರನ್ನು ನೇಮಕ ಮಾಡಿದೆ.
ಅಮೆರಿಕ ಮಾತ್ರವಲ್ಲದೆ ಇಡೀ ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಯುಎಸ್ ಫೆಡ್‌ನ ಈ ನೀತಿ ಪರಿಶೀಲನಾ ಸಮಿತಿಯಲ್ಲಿ ಭಾರತೀಯ ಮೂಲದ ತಜ್ಞರಿಗೆ ಮನ್ನಣೆ ಸಿಕ್ಕಿರುವುದು ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಸದ್ಯ ಚಿಕಾಗೊ ಬೂತ್ ಬಿಸಿನೆಸ್ ಸ್ಕೂಲ್‌ನಲ್ಲಿ ಪ್ರೊಫೆಸರ್ ಆಗಿರುವ ರಘುರಾಮ್ ರಾಜನ್(Raghuram Rajan) ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿ(Raj Chetty) ಅವರನ್ನು ಫೆಡ್‌ನ ಈ ಆರ್ಥಿಕ ಪರಾಮರ್ಶನಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರೊಂದಿಗೆ ತಂತ್ರಜ್ಞಾನ ಮತ್ತು ಆಡಳಿತ ರಂಗದ ತಜ್ಞೆ ಆಶಾ ಶರ್ಮಾ ಅವರನ್ನೂ ಪ್ರಮುಖ ಕಾರ್ಯಪಡೆಗೆ ಆಯ್ಕೆ ಮಾಡಲಾಗಿದೆ.
ನೇಮಕ ಮಾಡಿದ್ದು ಯಾಕೆ?
ಅಮೆರಿಕದ ಫೆಡರಲ್ ರಿಸರ್ವ್ ಪ್ರತಿ 5 ವರ್ಷಗಳಿಗೊಮ್ಮೆ ತನ್ನ ವಿತ್ತೀಯ ನೀತಿ ಚೌಕಟ್ಟು (Monetary Policy Framework) ಮತ್ತು ಸಂವಹನ ತಂತ್ರಗಳನ್ನು ಮರುಪರಿಶೀಲಿಸುತ್ತದೆ. ಪ್ರಸ್ತುತ ಜಾಗತಿಕವಾಗಿ ಎದುರಾಗುತ್ತಿರುವ ಆರ್ಥಿಕ ಏರಿಳಿತಗಳು, ಹಣದುಬ್ಬರ (Inflation) ಮತ್ತು ಉದ್ಯೋಗ ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲು ಹೊಸ ಕಾರ್ಯತಂತ್ರಗಳನ್ನು ರೂಪಿಸಲು ಈ ತಜ್ಞರ ತಂಡವು ನೆರವಾಗಲಿದೆ.
ಈ ಕಾರ್ಯಪಡೆಗಳು ನೀಡುವ ವರದಿ ಮತ್ತು ಶಿಫಾರಸುಗಳ ಆಧಾರದ ಮೇಲೆಯೇ ಯುಎಸ್ ಫೆಡರಲ್ ರಿಸರ್ವ್ ಮುಂಬರುವ ದಿನಗಳಲ್ಲಿ ತನ್ನ ಬಡ್ಡಿದರಗಳ (Interest Rates) ಏರಿಳಿತ ಮತ್ತು ಹಣದುಬ್ಬರ ನಿಯಂತ್ರಣದ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ. ಇದನ್ನೂ ಓದಿ: ಇಸ್ರೇಲ್ ನೀಡಿದ ಸ್ಫೋಟಕ ಮಾಹಿತಿ ಕೇಳಿ ಸಿಐಎ ಶಾಕ್ – ಇರಾನ್ ಮೇಲೆ ದಾಳಿಗೆ ಟ್ರಂಪ್ ಆದೇಶ

ಯಾರಿಗೆ ಏನು ಜವಾಬ್ದಾರಿ?:
ರಘುರಾಮ್ ರಾಜನ್: ಜಾಗತಿಕ ಆರ್ಥಿಕತೆ ಮತ್ತು ವಿತ್ತೀಯ ನೀತಿಗಳ ಕುರಿತಾದ ತಮ್ಮ ಅಪಾರ ಅನುಭವದ ಆಧಾರದ ಮೇಲೆ ಫೆಡ್‌ನ ದೀರ್ಘಕಾಲೀನ ಆರ್ಥಿಕ ಕಾರ್ಯತಂತ್ರಗಳ ಮೌಲ್ಯಮಾಪನ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ರಾಜ್ ಚೆಟ್ಟಿ: ಅಮೆರಿಕದ ಆರ್ಥಿಕತೆಯಲ್ಲಿನ ಆದಾಯದ ಅಸಮಾನತೆ ಹಾಗೂ ಉದ್ಯೋಗಾವಕಾಶಗಳ ಚಲನಶೀಲತೆಯ ಕುರಿತು ಸಂಶೋಧನೆ ನಡೆಸಿರುವ ಇವರು, ಆರ್ಥಿಕ ನೀತಿಗಳು ತಳಮಟ್ಟದ ಜನರ ಮೇಲೆ ಬೀರುವ ಪ್ರಭಾವದ ಕುರಿತು ಸಲಹೆ ನೀಡಲಿದ್ದಾರೆ.
ಆಶಾ ಶರ್ಮಾ: ಪ್ರಸ್ತುತ ಮೈಕ್ರೋಸಾಫ್ಟ್ ಗೇಮಿಂಗ್‌ನ (Xbox) ಕಾರ್ಯನಿರ್ವಾಹಕ ಉಪಾಧ್ಯಕ್ಷ (EVP) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಸೇವೆ ಸಲ್ಲಿಸುತ್ತಿರುವ ಇವರು ಮಾರುಕಟ್ಟೆ ಮತ್ತು ತಂತ್ರಜ್ಞಾನದ ಬದಲಾವಣೆಗಳಿಗೆ ತಕ್ಕಂತೆ ಫೆಡ್ ತನ್ನ ನೀತಿಗಳನ್ನು ಹೇಗೆ ಜನರಿಗೆ ತಲುಪಿಸಬೇಕು (Communication Strategy) ಎಂಬ ಕಾರ್ಯಪಡೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಚೆನ್ನೈನಲ್ಲಿ ಬಿಗ್ ಬ್ಯಾಷ್ ಲೀಗ್ ಉದ್ಘಾಟನಾ ಪಂದ್ಯ – ಆಸೀಸ್ ಪ್ರಧಾನಿ ಅಧಿಕೃತ ಘೋಷಣೆ
