ಕಾರವಾರ: ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಪ್ರತಿವರ್ಷದಂತೆ ಈ ಭಾರಿಯೂ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಖುದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ನೂರಾರು ಮಂದಿ ಸ್ವಚ್ಛತೆ ನಡೆಸುವ ಮೂಲಕ ವಿಭಿನ್ನವಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜನ್ಮ ದಿನಾಚರಣೆಯನ್ನು ಆಚರಿಸಿದರು.
ನಗರಸಭೆಯಿಂದ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಹಾಗೂ ಸ್ವಚ್ಛತಾ ಕಾರ್ಯಕ್ರಮಕ್ಕೆ ನಗರಸಭೆ ಉದ್ಯಾನವನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಚಾಲನೆ ನೀಡಿದರು. ನಂತರ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಡಲತೀರ ಸ್ಪಚ್ಛ ಮಾಡುವ ಮೂಲಕ ಗಾಂಧಿ ಜಯಂತಿ ಆಚರಿಸಿದರು. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ
ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ ಸೇರಿದಂತೆ ಸದಸ್ಯರು, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಕ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸೇರಿದಂತೆ ಅಧಿಕಾರಿಗಳು ಸಹ ಕಡಲತೀರದಲ್ಲಿ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು. ಟ್ಯಾಗೋರ್ ಕಡಲತೀರದುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲ್, ಚೀಲ, ಬಟ್ಟೆ ಹಾಗೂ ಬಲೆ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಆಯ್ದು ಸ್ವಚ್ಛಗೊಳಿಸಿದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಎನ್ ಸಿಸಿ ಕೆಡೆಟ್, ಪೊಲೀಸರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.