ಮುಂಬೈ: ಮಹಾರಾಷ್ಟ್ರದ ನಾಸಿಕ್ನಲ್ಲಿ ದಿನೇದಿನೆ ಹೆಚ್ಚುತ್ತಿರುವ ಬೀದಿ ನಾಯಿಗಳ (Stray Dog) ಹಾವಳಿಯಿಂದ ರೋಸಿ ಹೋದ ವ್ಯಕ್ತಿಯೊಬ್ಬರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ(Protest) ನಡೆಸಿ ಸುದ್ದಿಯಾಗಿದ್ದಾರೆ.
ಆಡಳಿತದ ವೈಫಲ್ಯವನ್ನು ಖಂಡಿಸಿ ಯುವಸೇನಾ ಕಾರ್ಯಕರ್ತರು ನಗರ ಪಂಚಾಯತ್ ಮುಖ್ಯಾಧಿಕಾರಿಯ ಕಚೇರಿಗೆ ಎರಡು ಬೀದಿ ನಾಯಿ ಮರಿಗಳನ್ನು(Stray Puppies) ತಂದು ಅವರ ಟೇಬಲ್ ಮೇಲೆಯೇ ಬಿಟ್ಟು ಆಕ್ರೋಶ ಹೊರಹಾಕಿದ್ದಾರೆ.
ನಾಸಿಕ್ ಜಿಲ್ಲೆಯ ನಿಫಾಡ್ ನಗರ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಶಿವಸೇನೆಯ ಯುವ ಘಟಕವಾದ ಯುವಸೇನಾದ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಂಧವೆ ನೇತೃತ್ವದಲ್ಲಿ ಕಾರ್ಯಕರ್ತರು ಈ ಹೈಡ್ರಾಮಾ ನಡೆಸಿದ್ದಾರೆ.
ಚೀಲಗಳಲ್ಲಿ ತಂದಿದ್ದ ಎರಡು ನಾಯಿ ಮರಿಗಳನ್ನು ಮುಖ್ಯಾಧಿಕಾರಿ ಧೀರಜ್ ಭಾಮ್ರೆ ಅವರ ಮೇಜಿನ ಮೇಲೆಯೇ ಬಿಟ್ಟಿದ್ದಾರೆ. ಆ ಮರಿಗಳು ಟೇಬಲ್ ಮೇಲೆಲ್ಲಾ ಅತ್ತಿತ್ತ ಓಡಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೇ ಅಧಿಕಾರಿಯ ಮೇಜಿನ ಮೇಲೆ ನೋಟುಗಳ ಹಾರವನ್ನಿಟ್ಟು ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.
SHOCKING: Stray dogs were released inside the Niphad Nagar Panchayat office by a person in Nashik to protest alleged administrative inaction over the growing stray dog menace 😳 pic.twitter.com/dUwhWeYB3W
— News Algebra (@NewsAlgebraIND) September 17, 2026
ನಿಫಾಡ್ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿದ್ದು, ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ ಹಲವು ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ಸಾರ್ವಜನಿಕರು ನಿರಂತರವಾಗಿ ದೂರು ನೀಡುತ್ತಿದ್ದರೂ ನಗರ ಪಂಚಾಯತ್ ಆಡಳಿತ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಂಟಿ ಹಿಂದೆ ಬಿದ್ದು ಪೇಚಿಗೆ ಸಿಲುಕಿದ ಟ್ಯಾಟೂ ಘೋಸ್ಟ್ – ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ ಆರೋಪ
ಪಟ್ಟಣದಲ್ಲಿ ತಕ್ಷಣವೇ ನಾಯಿಗಳ ಸಂತಾನಹರಣ ಚಿಕಿತ್ಸೆ (Sterilization) ಅಭಿಯಾನ ಆರಂಭಿಸಬೇಕು. ನಾಯಿಗಳನ್ನು ಹಿಡಿಯಲು ಸೂಕ್ತ ವ್ಯವಸ್ಥೆ ಮಾಡಬೇಕು ಹಾಗೂ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಯುವಸೇನಾ ಮುಖಂಡರು ಒತ್ತಾಯಿಸಿದ್ದಾರೆ.
ನಮ್ಮ ಸಮಸ್ಯೆಗಳನ್ನು ಆಲಿಸಿ ತಕ್ಷಣ ಪರಿಹರಿಸುವ ಬದಲು ಆಡಳಿತ ಕೇವಲ ಟೆಂಡರ್ ಪ್ರಕ್ರಿಯೆಗಳಲ್ಲೇ ಕಾಲಹರಣ ಮಾಡುತ್ತಿದೆ ಎಂದು ರಂಧವೆ ಕಿಡಿಕಾರಿದ್ದಾರೆ. ಒಂದು ವೇಳೆ ಆಡಳಿತ ಮಂಡಳಿ ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಮತ್ತೊಮ್ಮೆ ಬೀದಿ ನಾಯಿಗಳನ್ನು ಮುಖ್ಯಾಧಿಕಾರಿಗಳ ಕಚೇರಿಯೊಳಗೆ ಬಿಟ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

