– ಅಮೆರಿಕದ ಮಾಧ್ಯಮ ವರದಿಯಲ್ಲಿ ಸ್ಫೋಟಕ ಮಾಹಿತಿ ಉಲ್ಲೇಖ
ಪ್ಯಾರಿಸ್: ಫ್ರಾನ್ಸ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು (France Student protests) ಮತ್ತು ಇತ್ತೀಚಿನ ಗಲಭೆಗಳ ಹಿಂದೆ ಜಾಗತಿಕ ಎಡಪಂಥೀಯ ಸಂಘಟನೆಗಳ ಜಾಲ ಕಾರ್ಯನಿರ್ವಹಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಸಂಘರ್ಷದ ನಡುವೆ ಭಾರತದ ಹೆಸರು ಕೇಳಿ ಬಂದಿದ್ದು ಫ್ರಾನ್ಸ್ನ ಪ್ರತಿಭಟನೆಗಳ ಜಾಲದ ಸಂಪರ್ಕ ಭಾರತಕ್ಕೂ ವ್ಯಾಪಿಸಿದೆ.
ಪ್ರಾನ್ಸ್ ಪ್ರತಿಭಟನೆಗಳ ಹಿಂದೆ 50 ಸಂಘಟನೆಗಳ ಜಾಲವಿದೆ ಎಂದು ಅಮೆರಿಕದ ಫಾಕ್ಸ್ ನ್ಯೂಸ್ ವರದಿಯಲ್ಲಿ ಸ್ಫೋಟಕ ಮಾಹಿತಿ ಉಲ್ಲೇಖಿಸಿದೆ.
ಹೌದು, ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿ, ಯುವ ಸಂಘಟನೆಗಳು, ಕಾರ್ಮಿಕ ಸಂಘಗಳು ಹಾಗೂ ರಾಜಕೀಯ ಸಂಘಟನೆಗಳ ಪಾತ್ರದ ಬಗ್ಗೆ ವರದಿಯಲ್ಲಿ ಪ್ರಸ್ತಾಪವಾಗಿದ್ದು, 15 ವಿದ್ಯಾರ್ಥಿ ಅಥವಾ ಯುವ ಸಂಘಟನೆಗಳಾಗಿವೆ. ಉಳಿದ 35 ಸಂಘಟನೆಗಳಲ್ಲಿ ಕಾರ್ಮಿಕ ಸಂಘಗಳು, ಕಮ್ಯುನಿಸ್ಟ್ ಮತ್ತು ಸಮಾಜವಾದಿ ಸಂಘಟನೆಗಳು, ರಾಜಕೀಯ ಪಕ್ಷಗಳು, ನಾಗರಿಕ ಹಕ್ಕುಗಳ ಸಂಘಟನೆಗಳು ಹಾಗೂ ವಿವಿಧ ಅಭಿಯಾನಗಳಲ್ಲಿ ತೊಡಗಿರುವ ಗುಂಪುಗಳು ಸೇರಿವೆ ಎನ್ನಲಾಗಿದೆ.
ಅಮೆರಿಕದಿಂದ ಭಾರತವರೆಗೂ ಜಾಲದ ವ್ಯಾಪ್ತಿ?
ಫ್ರಾನ್ಸ್ನ ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಮತ್ತು ಶಾಲೆಗಳ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಆರಂಭವಾದ ಪ್ರತಿಭಟನೆಗಳಿಗೆ ನಂತರ ವಿವಿಧ ರಾಜಕೀಯ ಸಂಘಟನೆಗಳು ಬೆಂಬಲ ನೀಡಿವೆ. ಅಮೆರಿಕ, ಬ್ರಿಟನ್, ಗ್ರೀಸ್, ಬ್ರೆಜಿಲ್ ಮತ್ತು ಭಾರತದಲ್ಲಿಯೂ ಈ ಜಾಲಕ್ಕೆ ಸಂಬಂಧಿಸಿದ ಸಂಘಟನೆಗಳು ಸಕ್ರಿಯವಾಗಿವೆ ಎಂದು ಫಾಕ್ಸ್ ನ್ಯೂಸ್ ಡಿಜಿಟಲ್ ಆರೋಪಿಸಿದೆ.
ಪ್ರತಿಭಟನೆಗಳಿಗೆ ಬೆಂಬಲಿಗರನ್ನು ಸಂಘಟಿಸುವುದು, ಮುಷ್ಕರಗಳಿಗೆ ಕರೆ ನೀಡುವುದು ಹಾಗೂ ಸಾಮಾಜಿಕ ಮಾಧ್ಯಮ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳ ಮೂಲಕ ಪ್ರತಿಭಟನೆಗಳ ವ್ಯಾಪ್ತಿಯನ್ನು ಹೆಚ್ಚಿಸುವುದು ಈ ಸಂಘಟನೆಗಳ ಚಟುವಟಿಕೆಗಳಾಗಿವೆ. ಶಿಕ್ಷಣಕ್ಕೆ ಸಂಬಂಧಿಸಿದ ಬೇಡಿಕೆಗಳೊಂದಿಗೆ ಆರಂಭವಾದ ಚಳವಳಿಯಲ್ಲಿ ಬಳಿಕ ಬಂಡವಾಳಶಾಹಿ ವ್ಯವಸ್ಥೆ, ಸರ್ಕಾರಿ ವೆಚ್ಚ ಕಡಿತ, ಪೊಲೀಸ್ ವ್ಯವಸ್ಥೆ, ರಕ್ಷಣಾ ವೆಚ್ಚ ಮತ್ತು ಇಸ್ರೇಲ್ಗೆ ಸಂಬಂಧಿಸಿದ ವಿಚಾರಗಳೂ ಮುನ್ನೆಲೆಗೆ ಬಂದಿವೆ ಎಂದು ವರದಿ ಹೇಳಿದೆ.ಇದನ್ನೂ ಓದಿ: ಕೆಆರ್ಎಸ್ಗೆ ಹೆಚ್ಚಿದ ಒಳಹರಿವು – ಮಂಡ್ಯದ ರೈತರಲ್ಲಿ ಹರ್ಷ
ಭಾರತ ಮೂಲದ ಸಂಘಟನೆಯ ಪ್ರಸ್ತಾಪ
ಫ್ರಾನ್ಸ್ನಲ್ಲಿರುವ ಇಂಡಿಯನ್ ಅಲಯನ್ಸ್ ಪ್ಯಾರಿಸ್ ಎಂಬ ಸಂಘಟನೆಯನ್ನೂ ವರದಿ ಉಲ್ಲೇಖಿಸಿದೆ. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರೊಂದಿಗೆ ಸಂಬಂಧ ಹೊಂದಿರುವ ಈ ಸಂಘಟನೆ, ಫ್ರಾನ್ಸ್ನ ಪ್ರತಿಭಟನೆಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲ ವ್ಯಕ್ತಪಡಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಫ್ರಾನ್ಸ್ ಮತ್ತು ಭಾರತದಲ್ಲಿನ ಯುವಜನರ ಪ್ರತಿಭಟನೆಗಳನ್ನು ಹೋಲಿಕೆ ಮಾಡಿ ಈ ಸಂಘಟನೆ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿತ್ತು. ಅಕ್ಟೋಬರ್ 6ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದಕ್ಕೆ ಸಂಬಂಧಿಸಿದ ವಿಡಿಯೊವನ್ನೂ ಸಂಘಟನೆ ಹಂಚಿಕೊಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 7ರಂದು ಭಾರತದಲ್ಲಿ ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ ಹಾಗೂ ವಿರೋಧ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂಬ ಆರೋಪಗಳನ್ನು ಒಳಗೊಂಡ ಸುದ್ದಿಯ ತುಣುಕನ್ನೂ ಸಂಘಟನೆ ಹಂಚಿಕೊಂಡಿತ್ತು.
ಹಿಂಸಾಚಾರಕ್ಕೆ ಮ್ಯಾಕ್ರನ್ ಖಂಡನೆ
ಇದೇ ವೇಳೆ, ಫ್ರಾನ್ಸ್ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಖಂಡಿಸಿದ್ದಾರೆ. ಹಿಂಸೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಬೆಲೆ ಏರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ, ಅಂಗಡಿಗಳ ಲೂಟಿ ಮತ್ತು ಸಾರ್ವಜನಿಕ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಫ್ರಾನ್ಸ್ ಪ್ರತಿಭಟನೆಗಳ ಹಿಂದೆ ಜಾಗತಿಕ ಎಡಪಂಥೀಯ ಸಂಘಟನೆಗಳ ಸಂಯೋಜಿತ ಜಾಲದ ಬಗ್ಗೆ ಮಾಹಿತಿ ತನಿಖೆಯನ್ನು ಹೊಸ ದಿಕ್ಕಿಗೆ ಕೊಂಡಯ್ಯೂದಿದ್ದು ಇದು ಅಂತರಾಷ್ಟ್ರೀಯ ಸಂಘಟನೆಗಳ ಭಾಗಿಯ ಅನುಮಾನಗಳನ್ನು ಹೆಚ್ಚಿಸಿದೆ..ಇದನ್ನೂ ಓದಿ: ಸಿದ್ದರಾಮಯ್ಯರನ್ನ ಬ್ಲ್ಯಾಕ್ಮೇಲ್ ಮಾಡಿ ರಾಜೀನಾಮೆ ಕೊಡಿಸಿದ್ರು ಅನ್ನೋ ಮಾಹಿತಿ ಇದೆ: ಶೋಭಾ ಕರಂದ್ಲಾಜೆ
