ಹಾಸನ: ಒಬ್ಬ ಸಾಮಾನ್ಯ ಅಸಿಸ್ಟೆಂಟ್ ಡೈರೆಕ್ಟರ್ ಮಗ ಇಂದು ಡಿಎಂಕೆ, ಎಐಎಡಿಎಂಕೆ ಮತ್ತು ಕಾಂಗ್ರೆಸ್‌ನ್ನು ಹಿಂದೆ ಹಾಕಿ ತಮಿಳುನಾಡಿನಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ತಮಿಳುನಾಡು ಸಿಎಂ ಜೋಸೆಫ್ ವಿಜಯ್ (Vijay) ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (H.D.Deve Gowda) ಹಾಡಿಹೊಗಳಿದರು.
ಹಾಸನದಲ್ಲಿ ಮಾತನಾಡಿದ ಅವರು, ಕೆ.ಕಾಮರಾಜ್, ಎಂಜಿಆರ್, ಕರುಣಾನಿಧಿ, ಜಯಲಲಿತಾ ಅವರಂತಹ ನಾಯಕರ ನಂತರ ವಿಜಯ್ ದೊಡ್ಡ ಮಟ್ಟದಲ್ಲಿ ಜನಬೆಂಬಲ ಪಡೆದಿದ್ದಾರೆ. ಅವರು ಎಲ್ಲಿಗೆ ಹೋದರೂ ಲಕ್ಷಾಂತರ ಜನ ಸೇರುತ್ತಾರೆ. ಒಬ್ಬ ಸಾಮಾನ್ಯ ಅಸಿಸ್ಟೆಂಟ್ ಡೈರೆಕ್ಟರ್ ಮಗ ಇಷ್ಟು ಎತ್ತರಕ್ಕೆ ಬೆಳೆದಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿದ ಎಐಎಡಿಎಂಕೆಯ ಷಣ್ಮುಗಂ ಬಣ
ಕಾಂಗ್ರೆಸ್ ಡಿಎಂಕೆ ಬಿಟ್ಟು ಟಿವಿಕೆಗೆ ಬೆಂಬಲ ನೀಡಿದ ವಿಚಾರವಾಗಿ ಮಾತನಾಡಿ, ಟಿಕೆಟ್ ಹಂಚಿಕೆ ವೇಳೆ ಕಾಂಗ್ರೆಸ್ ಮತ್ತು ಸ್ಟಾಲಿನ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಅದು ಅವರ ವೈಯಕ್ತಿಕ ವಿಷಯ. ಕರುಣಾನಿಧಿ ಕಾಲದಲ್ಲಿ ಎಷ್ಟು ಸೀಟು ಕೊಡುತ್ತಿದ್ದರು, ಈಗ ಸ್ಟಾಲಿನ್ ಏನು ಮಾಡಿದ್ದಾರೆ ಎಂಬ ಚರ್ಚೆಯಿಂದ ಪ್ರಯೋಜನ ಇಲ್ಲ. ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಸಮಸ್ಯೆಗಳ ಬಗ್ಗೆ ವಿಜಯ್ ಅವರ ಜೊತೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುವ ಸಂದರ್ಭ ಬರಬಹುದು ಎಂದರು.
ನಂತರ ಹಾಸನ ಹೊರವಲಯದ ಕೌಶಿಕ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಮೆಗಾ ಡೈರಿಯನ್ನು ದೇವೇಗೌಡರು ವೀಕ್ಷಿಸಿದರು. ಈ ವೇಳೆ ಮೆಗಾ ಡೈರಿ ಯೋಜನೆ ಕುರಿತು ಪುತ್ರ ರೇವಣ್ಣ ಮಾಹಿತಿ ನೀಡಿದರು. ಜೂನ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಗಾ ಡೈರಿ ಉದ್ಘಾಟಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಹೆಚ್‌ಡಿಡಿ, 900 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ. ಹಿಂದೆ ನೀಡಿದ್ದ ಹಣವನ್ನು ಕೂಡ ವಾಪಸ್ ಪಾವತಿಸಲಾಗಿದೆ. ಈ ಸಂಸ್ಥೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಕೇಂದ್ರ ಸರ್ಕಾರ 280 ಕೋಟಿ ರೂ. ನೆರವು ನೀಡಿದೆ. ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ರೈತರಿಗೆ ಈ ಯೋಚನೆ ನೆರವಾಗಲಿದೆ. ಹಾಸನ ಜಿಲ್ಲೆಯಿಂದ ಪ್ರತಿದಿನ 11 ಲಕ್ಷ ಲೀಟರ್ ಹಾಲು ಬರುತ್ತದೆ. ಕೊಡಗಿನಿಂದ 30 ರಿಂದ 40 ಸಾವಿರ ಲೀಟರ್ ಹಾಗೂ ಚಿಕ್ಕಮಗಳೂರಿನಿಂದ ಒಂದು ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಬರುತ್ತಿದೆ ಎಂದು ಮಾಹಿತಿ ನೀಡಿದರು.
ಜರ್ಮನಿ ತಂತ್ರಜ್ಞಾನ ಬಳಸಿಕೊಂಡು ಮೆಗಾ ಡೈರಿ ನಿರ್ಮಾಣ ಮಾಡಲಾಗುತ್ತಿದೆ. ಇದು ರೇವಣ್ಣ ಅವರ ಕನಸಿನ ಯೋಜನೆ. ಇಲ್ಲಿ ಬೋಟಿಂಗ್ ಹಾಗೂ ಮಕ್ಕಳಿಗಾಗಿ ರೈಲು ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ದಳಪತಿ `ವಿಜಯ’ದ ಭವಿಷ್ಯ ನುಡಿದಿದ್ದ ಜ್ಯೋತಿಷಿ ಈಗ ಸಿಎಂ ವಿಶೇಷ ಕರ್ತವ್ಯಾಧಿಕಾರಿ
ಪ್ರಧಾನಮಂತ್ರಿಗಳನ್ನು ಭೇಟಿಯಾದಾಗ ಈ ತಿಂಗಳಲ್ಲೇ ಉದ್ಘಾಟನೆ ಮಾಡಬೇಕು ಎಂದು ಕೇಳಿಕೊಂಡಿದ್ದೆ. ಮಠದ ಕಾರ್ಯಕ್ರಮದ ದಿನವೇ ಉದ್ಘಾಟನೆ ಆಗಬೇಕಿತ್ತು. ಜೂನ್ ತಿಂಗಳಲ್ಲಿ ಮೋದಿಯವರೇ ಮೆಗಾ ಡೈರಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಜೂನ್ ಒಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿ. ಮತ್ತೊಮ್ಮೆ ನಾನು ಬಂದು ಕಾಮಗಾರಿ ಪರಿಶೀಲಿಸುತ್ತೇನೆ. ನನಗೆ ಸಮಾಧಾನವಾದರೆ ಪ್ರಧಾನಮಂತ್ರಿಗಳನ್ನು ಕರೆದುಕೊಂಡು ಬರುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇದು ರೇವಣ್ಣ ಅವರ ಶ್ರಮದ ಫಲ. ಕುಮಾರಸ್ವಾಮಿ ಕೂಡ ಕಾರ್ಯಕ್ರಮಕ್ಕೆ ಬರುತ್ತಾರೆ. ಹಾಲು ಹಾಕುವ ಎರಡು ಲಕ್ಷ ಜನರನ್ನು ಸೇರಿಸುತ್ತೇವೆ. ಪ್ರಧಾನಮಂತ್ರಿಗಳು ಬರುವ ಮುನ್ನ ಬಡ ರೈತರಿಗೆ 20 ಸಾವಿರ ಹಸುಗಳನ್ನು ನೀಡುವ ತೀರ್ಮಾನ ಮಾಡಲಾಗಿದೆ ಎಂದು ದೇವೇಗೌಡರು ತಿಳಿಸಿದರು.
ಅಲ್ಲದೇ, ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ದೇವೇಗೌಡರು ಭೇಟಿ ನೀಡಿದರು. ಈ ವೇಳೆ ಕಾಲೇಜಿನ ಉಪನ್ಯಾಸಕಿಯರು ದೇವೇಗೌಡರಿಗೆ ಆರತಿ ಬೆಳಗಿ ಸ್ವಾಗತಿಸಿದರು. ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಮಹಿಳಾ ಸಿಬ್ಬಂದಿಯಿಂದ ಟೇಪ್ ಕಟ್ ಮಾಡಿಸಿ ಘಟಕವನ್ನು ಉದ್ಘಾಟಿಸಿದರು. ದೇವೇಗೌಡರ ಜೊತೆ ಫೋಟೋ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದರು.

