ವಿಭಿನ್ನ ಕಥಾಹಂದರ ಹೊಂದಿರುವ “ಡವ್ ಮಾಸ್ಟರ್” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟ್ರೇಲರ್ ಅನಾವರಣ ಮಾಡಿದರು. ಹಾಡುಗಳನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕ ಭೈರತಿ ಸುರೇಶ್, ನಾರಾಯಣ ಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್ ಎ ಚಿನ್ನೇಗೌಡ, ಕೆ.ವಿ.ಚಂದ್ರಶೇಖರ್, ಹಾಲಿ ಅಧ್ಯಕ್ಷರಾದ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ಮಾಪಕರಾದ ಸಿದ್ದರಾಜು, ಭಾ.ಮ.ಗಿರೀಶ್ ಸೇರಿದಂತೆ ಹಲವು ಗಣ್ಯರು ಬಿಡುಗಡೆಗೊಳಿಸಿದರು.
Advertisement
“ಡವ್ ಮಾಸ್ಟರ್” ಚಿತ್ರ ನಾಯಿ ಹಾಗೂ ಮನುಷ್ಯನ ಸಂಬಂಧದ ನಡುವಿನ ಕಥಾಹಂದರ ಹೊಂದಿರುವ ಚಿತ್ರ ಎಂದು ತಿಳಿದು ಸಂತೋಷವಾಯಿತು. ಪ್ರಾಣಿಗಳಲ್ಲೇ ಹೆಚ್ಚು ನಿಯತ್ತಿನ ಪ್ರಾಣಿ ನಾಯಿ ಎನ್ನುತ್ತೇವೆ. “ರಾಕಿ” ಎಂಬ ಹೆಸರಿನ ನಾಯಿ ಈ ಚಿತ್ರದಲ್ಲಿ ಅಭಿನಯಿಸಿದೆ. ತಬಲನಾಣಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆತ್ಮೀಯರಾದ ಚಾಂದ್ ಪಾಷ ಅವರ ಮಗ ರೋಷನ್ ಈ ಚಿತ್ರ ನಿರ್ಮಾಣ ಮಾಡಿರುವ ವಿಷಯ ತಿಳಿದು ಖುಷಿಯಾಯಿತು. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಎಲ್ಲರೂ ಈ ಚಿತ್ರ ನೋಡುವ ಮೂಲಕ ಪ್ರೋತ್ಸಾಹಿಸಿ ಎಂದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
Advertisement
Advertisement
ನಿರ್ದೇಶಕ ಆರ್ಯ ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು. ನಾನು ಇಪ್ಪತ್ತೈದು ವರ್ಷಗಳಿಂದ ಚಿತ್ರರಂಗದಲ್ಲಿ ವಿತರಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ ಚಿತ್ರ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ನನ್ನ ಮಗ ರೋಷನ್ ನೋಡಿಕೊಳ್ಳುತ್ತಿದ್ದಾನೆ. ಈ ಸಮಾರಂಭಕ್ಕೆ ಆಗಮಿಸಿರುವ ಸಿದ್ದರಾಮಯ್ಯ ಅವರು ಸೇರಿದಂತೆ ಎಲ್ಲಾ ಗಣ್ಯರಿಗೆ ನನ್ನ ಧನ್ಯವಾದ ಎಂದರು ಚಾಂದ್ ಪಾಷಾ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ
Advertisement
ನನ್ನ ಕಥೆ ಇಷ್ಟಪಟ್ಟು ನಿರ್ಮಾಣ ಮಾಡಿದ ನಿರ್ಮಾಪಕರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ. ಸಿದ್ದರಾಮಯ್ಯ ಅವರಿಂದ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದು ಈಡೇರಿದೆ. ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಆರ್ಯ. ನನ್ನ ಅಭಿನಯದ ಚಿತ್ರವೊಂದಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಆರ್ಯ ಈ ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ನಾಯಿ ಹಾಗೂ ನನ್ನ ನಡುವಿನ ಬಾಂಧವ್ಯದ ಸನ್ನಿವೇಶಗಳನ್ನು ನಿರ್ದೇಶಕರು ಮನಮುಟ್ಟುವಂತೆ ತೋರಿಸಿದ್ದಾರೆ. ರಾಕಿ(ನಾಯಿ) ನನಗಿಂತ ಚೆನ್ನಾಗಿ ನಟಿಸಿದೆ ಅಂತ ಹೇಳಬಹುದು ಎಂದು ತಬಲನಾಣಿ ತಿಳಿಸಿದರು.
ನಿರ್ಮಾಪಕ ಸಿ.ರೋಷನ್, ಸಂಗೀತ ನಿರ್ದೇಶಕ ಶಕೀಲ್ ಅಹ್ಮದ್, ಛಾಯಾಗ್ರಾಹಕ ಕಿರಣ್ ಕುಮಾರ್, ನಟಿ ಪಂಕಜ ಹಾಗೂ ಹಾಡು ಬರೆದಿರುವ ಸೌಮ್ಯ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಬಲ ನಾಣಿ, ಶಕೀಲ, ಕುರಿ ಪ್ರತಾಪ್, ಮಿತ್ರ, ನವೀನ್ ಪಡೀಲ್, ಪಂಕಜ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಕಿ(ನಾಯಿ) ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದೆ.