-ಪಾದಯಾತ್ರೆಗೆ ಬರುವ ಭಕ್ತರ ಸುರಕ್ಷತೆಗೆ ಆದ್ಯತೆ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hills) ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಜಾತ್ರೆ ಪ್ರಾರಂಭವಾಗಿದ್ದು, ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಸುರಕ್ಷತೆ ಹಾಗೂ ಅರಣ್ಯದಲ್ಲಿರುವ ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಅರಣ್ಯ ಇಲಾಖೆಯ ವತಿಯಿಂದ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಳೆದ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಚಿರತೆಗಳ ಚಲನವಲನದಿಂದಾಗಿ ಕೆಲವು ಅಹಿತಕರ ಘಟನೆಗಳು ಸಂಭವಿಸಿದ್ದ ಹಿನ್ನೆಲೆ ಈ ಬಾರಿ ಅಂತಹ ಘಟನೆಗಳು ಮರುಕಳಿಸದಂತೆ ಮುಂಚಿತವಾಗಿಯೇ ಸಮಗ್ರ ಕಾರ್ಯಯೋಜನೆಯನ್ನು ರೂಪಿಸಲಾಗಿದೆ. ಇದನ್ನೂ ಓದಿ: Bengaluru Horror | 15 ದಿನಗಳ ಅಂತರದಲ್ಲಿ 7 ಮಂದಿ ಮರ್ಡರ್ – ಹಂತಕನ ಕಂಪ್ಲೀಟ್ ಟೈಮ್ಲೈನ್ ರಿವಿಲ್!
ತಾಳಬೆಟ್ಟದಿಂದ ಆನೆತಲೆದಿಂಬದವರೆಗೆ ಸುಮಾರು 7 ಕಿ.ಮೀ. ಉದ್ದದ ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ ಮೆಟ್ಟಿಲು ಮಾರ್ಗವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಈ ಭಾಗವು ವನ್ಯಪ್ರಾಣಿಗಳ ಸ್ವಾಭಾವಿಕ ಆವಾಸಸ್ಥಾನ ಮತ್ತು ಸಂಚಾರ ಮಾರ್ಗವಾಗಿದೆ. ಆದ್ದರಿಂದ ಭಕ್ತಾದಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಳೆದ ವರ್ಷದಂತೆಯೇ ಪಾದಯಾತ್ರೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿದೆ.
ಪಾದಯಾತ್ರೆಗೆ ಸಮಯದ ನಿರ್ಬಂಧ:
ಭಕ್ತಾದಿಗಳು ಬೆಳಿಗ್ಗೆ 7 ಗಂಟೆಯ ನಂತರ ಹಾಗೂ ಸಂಜೆ 4 ಗಂಟೆಯ ಮೊದಲು ಮಾತ್ರ ತಾಳಬೆಟ್ಟದಿಂದ ಪಾದಯಾತ್ರೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಸಂಜೆ 4 ಗಂಟೆಯ ನಂತರ ತಾಳಬೆಟ್ಟದಿಂದ ಪಾದಯಾತ್ರೆಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ಈ ಸಮಯದ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ವಿನಂತಿಸಲಾಗಿದೆ.ಇದನ್ನೂ ಓದಿ: Bengaluru Murder Horror | ಮೈಸೂರಿನ ಚಾಮುಂಡಿಬೆಟ್ಟ, ಚಾರ್ಮಾಡಿ ಘಾಟ್ನಲ್ಲಿ ಮೃತದೇಹ ಎಸೆದಿರೋ ಶಂಕೆ!
ಅರಣ್ಯ ಇಲಾಖೆಯಿಂದ ಏಳು ವಿಶೇಷ ಗಸ್ತು ತಂಡಗಳ ನಿಯೋಜನೆ:
ಈ ಮಾರ್ಗದಲ್ಲಿ ನಿರಂತರ ನಿಗಾ ವಹಿಸಲು ಅರಣ್ಯ ಇಲಾಖೆಯ ವತಿಯಿಂದ ಒಟ್ಟು ಏಳು ವಿಶೇಷ ಗಸ್ತು ತಂಡಗಳನ್ನು ರಚಿಸಲಾಗಿದೆ.
1. ತಾಳಬೆಟ್ಟ – ಒಂದು ತಂಡ.
2. ಪನ್ನಾಚಿ ಕ್ರಾಸ್ – ಒಂದು ತಂಡ.
3. ರಂಗಸ್ವಾಮಿ ಒಡ್ಡು – ಒಂದು ತಂಡ.
4. ಆನೆತಲೆದಿಂಬ – ಒಂದು ತಂಡ.
5. ರಂಗಸ್ವಾಮಿ ಒಡ್ಡು ಮತ್ತು ಪನ್ನಾಚಿ ಕ್ರಾಸ್ ನಡುವಿನ ಮಾರ್ಗದಲ್ಲಿ ಪ್ರತಿ ಒಂದು ಕಿಲೋಮೀಟರ್ಗೆ ಒಂದರಂತೆ ಉಳಿದ ಮೂರು ತಂಡಗಳು.
ಪ್ರತಿಯೊಂದು ತಂಡದಲ್ಲಿ ಒಬ್ಬ ಉಪ ವಲಯ ಅರಣ್ಯಾಧಿಕಾರಿ ಅಥವಾ ಅರಣ್ಯ ರಕ್ಷಕರು ಹಾಗೂ ಇತರೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ತಂಡಗಳಿಗೆ ಬಂದೂಕು, ವಾಕಿ-ಟಾಕಿ, ಪಟಾಕಿ, ಡ್ರೋನ್ ಸೇರಿದಂತೆ ಅಗತ್ಯ ಸುರಕ್ಷತಾ ಮತ್ತು ಸಂವಹನ ಸಾಧನಗಳನ್ನು ಒದಗಿಸಲಾಗಿದೆ. ಇದಲ್ಲದೆ, ಎರಡು ವಾಹನಗಳಲ್ಲಿ ತಲಾ ಒಂದು ತಂಡದಂತೆ ಎರಡು ಸಂಚಾರಿ ಗಸ್ತು ತಂಡಗಳನ್ನು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನಿಯೋಜಿಸಲಾಗಿದೆ.ಇದನ್ನೂ ಓದಿ: ಒಂದೇ ಕುಟುಂಬದ ಏಳು ಜನರ ನರಮೇಧ – ಶವದ ವಾಸನೆ ಬರದಂತೆ 10 ಲೇಯರ್ ಟೇಪ್ ಸುತ್ತಿದ್ದ ಪಾಪಿ
ಥರ್ಮಲ್ ಡ್ರೋನ್ ಮೂಲಕ ನಿಗಾ:
ಅರಣ್ಯ ಪ್ರದೇಶದಲ್ಲಿ ಚಿರತೆ, ಆನೆ ಸೇರಿದಂತೆ ಇತರೆ ವನ್ಯಪ್ರಾಣಿಗಳ ಚಲನವಲನಗಳನ್ನು ಥರ್ಮಲ್ ಡ್ರೋನ್ಗಳ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು. ವನ್ಯಪ್ರಾಣಿಗಳು ಕಂಡುಬಂದಲ್ಲಿ ಅವುಗಳನ್ನು ಸುರಕ್ಷಿತವಾಗಿ ದೂರಕ್ಕೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರಿಸ್ಥಿತಿಗೆ ಅನುಗುಣವಾಗಿ ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗ ಅಥವಾ ಸಾರಿಗೆ ವ್ಯವಸ್ಥೆಯ ಮೂಲಕ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು.
ಪೊಲೀಸ್ ಮತ್ತು ಚಿರತೆ ಕಾರ್ಯಪಡೆಯ ಸಹಕಾರ:
ಗಸ್ತು ಮತ್ತು ಭದ್ರತಾ ಕಾರ್ಯಗಳಿಗೆ ಪೊಲೀಸ್ ಇಲಾಖೆ ಹಾಗೂ ಹೋಂ ಗಾರ್ಡ್ ಸಿಬ್ಬಂದಿಯ ಸೇವೆಯನ್ನು ಕೋರಲಾಗಿದ್ದು, ಅವರನ್ನು ಸಹ ಈ ತಂಡಗಳೊಂದಿಗೆ ಸಮನ್ವಯಗೊಳಿಸಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಅಲ್ಲದೆ, ಮೈಸೂರಿನಿಂದ ಚಿರತೆ ಕಾರ್ಯಪಡೆಯ ತಂಡವನ್ನು ನಿಯೋಜಿಸುವಂತೆ ಕೋರಲಾಗಿದ್ದು, ಆ ತಂಡವೂ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲಿದೆ.ಇದನ್ನೂ ಓದಿ:Beng aluru Murder Horror | ಸೇಲಂನ ಘಾಟ್ ಕಾಡಿನಲ್ಲಿ ಹಂತಕ ಇಂದುಶೇಖರ್ ಪತ್ನಿ, ಅತ್ತೆಯ ಮೃತದೇಹ ಪತ್ತೆ
ಅರಣ್ಯ ಪ್ರದೇಶದಲ್ಲಿ ಆಹಾರ ಮತ್ತು ಪಾನೀಯ ವಿತರಣೆ ನಿಷೇಧ:
ಜಾತ್ರೆಯ ಸಂದರ್ಭದಲ್ಲಿ ಕೆಲವು ದಾನಿಗಳು ಭಕ್ತಾದಿಗಳಿಗೆ ನೀರಿನ ಬಾಟಲಿ, ಮಜ್ಜಿಗೆ ಪ್ಯಾಕೆಟ್ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಅರಣ್ಯದ ಮಧ್ಯಭಾಗದಲ್ಲಿ ವಿತರಿಸುವ ಪದ್ಧತಿ ಇದೆ. ಈ ಬಾರಿ ಅರಣ್ಯ ಪ್ರದೇಶದೊಳಗೆ ಇಂತಹ ವಿತರಣೆಗೆ ಅವಕಾಶ ನೀಡಲಾಗುವುದಿಲ್ಲ. ಭಕ್ತಾದಿಗಳಿಗೆ ಆಹಾರ ಮತ್ತು ಪಾನೀಯಗಳನ್ನು ತಾಳಬೆಟ್ಟ ಅಥವಾ ಅರಣ್ಯದ ಹೊರಭಾಗದಲ್ಲಿರುವ ಗ್ರಾಮಗಳಂತಹ ನಿಗದಿತ ಸ್ಥಳಗಳಲ್ಲಿ ಮಾತ್ರ ವಿತರಿಸಬೇಕು.
ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ:
ಪಾದಯಾತ್ರೆ ಮಾರ್ಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯುವುದನ್ನು ನಿಷೇಧಿಸಲಾಗಿದೆ. ಕೌದಳ್ಳಿ ಸಮೀಪ ತಪಾಸಣಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಪ್ಲಾಸ್ಟಿಕ್ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಪರಿಶೀಲಿಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲಾಗಿದೆ.
ಭಕ್ತಾದಿಗಳು ಪ್ಲಾಸ್ಟಿಕ್ ಬಾಟಲಿ, ಕವರ್ ಹಾಗೂ ಇತರೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ, ನಿಗದಿತ ಕಸದ ತೊಟ್ಟಿಗಳಲ್ಲಿ ಮಾತ್ರ ಹಾಕಬೇಕು. ಪ್ಲಾಸ್ಟಿಕ್ ತ್ಯಾಜ್ಯವು ವನ್ಯಪ್ರಾಣಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗುವುದಲ್ಲದೆ, ಅರಣ್ಯದ ಪರಿಸರ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ, ಭಕ್ತಾದಿಗಳು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ, ನಿಗದಿಪಡಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ವರ್ಷದ ದೀಪಾವಳಿ ಜಾತ್ರೆಯನ್ನು ಸುರಕ್ಷಿತವಾಗಿ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಅರಣ್ಯ ಇಲಾಖೆ ಈ ಮೂಲಕ ಮನವಿ ಮಾಡಿದೆ.ಇದನ್ನೂ ಓದಿ:ಹಂತಕನಿಗಿದ್ದದ್ದು ಏಳಲ್ಲ.. 9 ಜನರ ಟಾರ್ಗೆಟ್ – ಕನ್ನಡದಲ್ಲಿ ಮೆಸೇಜ್ ಮಾ ಡಿ ಸಿಕ್ಕಿಬಿದ್ದಿದ್ದು ರೋಚಕ
