ಚಿಕ್ಕಮಗಳೂರು: ಪರಿಸರವಾದಿ ಹಾಗೂ ಪ್ರಾಣಿ ಪ್ರಿಯರು ವಿರೋಧದ ಮಧ್ಯೆಯೂ ಕಾಫಿನಾಡಿನ (Chikkamagaluru) ಭಾಗದಲ್ಲಿ ಸಾರ್ವಜನಿಕರು ಹಾಗೂ ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಕಾಡುಕೋಣಗಳ (Gaur) ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ (Forest Department) ಆರಂಭಿಸಿದ್ದ ಆಪರೇಷನ್ ಕಾಡುಕೋಣ ಕಾರ್ಯಾಚರಣೆ ಯಶಸ್ವಿಯಾಗಿದೆ.

ರೈತರಿಗೆ ತೀವ್ರ ಕಾಟ ಕೊಡುತ್ತಿದ್ದ ಮೂರು ಕಾಡುಕೋಣಗಳ ಪೈಕಿ ಒಂದು ದೈತ್ಯ ಕಾಡುಕೋಣವನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ರೀತಿಯ ಕಾರ್ಯಚರಣೆ ದಕ್ಷಿಣ ಭಾರತದಲ್ಲೇ ಮೊದಲಾಗಿದೆ. ಇದನ್ನೂ ಓದಿ: ಸಾಕಾನೆ ಬಳಸಿ ಕಾಡುಕೋಣಗಳ ಶಿಫ್ಟ್ – ಇದು ದಕ್ಷಿಣ ಭಾರತದಲ್ಲೇ ಮೊದಲು
ವಿಷಯ ತಿಳಿಯುತ್ತಿದ್ದಂತೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೆರೆ ಸಿಕ್ಕ ಕಾಡುಕೋಣವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಶಿವಮೊಗ್ಗದ ತ್ಯಾವರೆಕೊಪ್ಪಕ್ಕೆ ಸ್ಥಳಾಂತರಿಸಿದ್ದಾರೆ.
ಕಾಡುಕೋಣಗಳ ಉಪಟಳದಿಂದ ಬೆಳೆ ಹಾನಿ ಅನುಭವಿಸಿ, ಜೀವಭಯದಲ್ಲೇ ಬದುಕುತ್ತಿದ್ದ ಮಲೆನಾಡ ರೈತರು ಮತ್ತು ಸಾರ್ವಜನಿಕರು ಕಾಡುಕೋಣ ಸೆರೆ ಕಾರ್ಯಾಚರಣೆಯಿಂದ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಈ ಕಾರ್ಯಾಚರಣೆಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಡುಕೋಣ ಅತ್ಯಂತ ಸೂಕ್ಷ್ಮ ಪ್ರಾಣಿ. ಹೆಚ್ಚು ಭಯವಾದರೆ ಹೃಯಾಘಾತದಿಂದ ಸಾವನ್ನಪ್ಪುತ್ತವೆ. ಕೂಡಲೇ ಈ ಕಾರ್ಯಾಚರಣೆ ಕೈಬಿಡುವಂತೆ ಆಗ್ರಹಿಸಿದ್ದರು. ಇದನ್ನೂ ಓದಿ: ವನ್ಯಜೀವಿ ಸಂಚಾರವಿರುವ ಚಾರಣಪಥ, ಸಂಚಾರಪಥ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ

