ಬೆಂಗಳೂರು: ರಾಜ್ಯ ಬಿಜೆಪಿಯ (Karnataka BJP) ಒಳಗಿನ ಅಡ್ಡಮತದಾನದ ರಾಜಕೀಯಕ್ಕೆ ಪವಿತ್ರ ಕ್ಷೇತ್ರ ಧರ್ಮಸ್ಥಳವನ್ನು (Dharmasthala) ಎಳೆದು ತರಲು ಹೊರಟಿದ್ದ ರಾಜ್ಯ ನಾಯಕರ ನಡೆಗೆ ಬಿಜೆಪಿ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿ ರೆಡ್ ಸಿಗ್ನಲ್ ನೀಡಿದೆ.
ಅಡ್ಡಮತದಾನ (Cross Vote) ನಡೆದಿರುವುದಕ್ಕೆ ರಾಜ್ಯ ನಾಯಕರ ನಿರ್ಲಕ್ಷ್ಯವೇ ಕಾರಣ ಎಂದು ಹೈಕಮಾಂಡ್ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.
ನಿಮ್ಮ ತಪ್ಪು ಮತ್ತು ವೈಫಲ್ಯದಿಂದಲೇ ರಾಜ್ಯದಲ್ಲಿ ಅಡ್ಡಮತದಾನ ಚಲಾವಣೆ ಆಯಿತು. ನಿಮಗೆ ಶಾಸಕರ ಮೇಲೆ ಯಾವುದೇ ಹಿಡಿತ ಇರಲಿಲ್ಲ, ಅವರ ಮೇಲೆ ಸರಿಯಾದ ನಿಗಾ ಇಡುವಲ್ಲಿಯೂ ನೀವು ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿ ನಿಮ್ಮದೇ ಶಾಸಕರನ್ನು ಸೆಳೆಯಲು ಅವಕಾಶ ಮಾಡಿಕೊಟ್ಟಿದ್ದೇ ನಿಮ್ಮ ಬೇಜವಾಬ್ದಾರಿತನ ಎಂದು ವರಿಷ್ಠರು ರಾಜ್ಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರೀ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಕೈಬಿಟ್ಟ ಬಿಜೆಪಿ
ಧರ್ಮಸ್ಥಳಕ್ಕೆ ರಾಜಕೀಯವನ್ನು ಎಳೆದು ತಂದು ಪಕ್ಷಕ್ಕೆ ಮತ್ತಷ್ಟು ಮುಜುಗರ ತರಬೇಡಿ ಎಂದು ಎಚ್ಚರಿಸಿರುವ ಹೈಕಮಾಂಡ್, ಈಗಾಗಲೇ ಆಗಿರುವ ಎಡವಟ್ಟನ್ನು ಮೊದಲು ಸರಿಪಡಿಸುವುದು ಹೇಗೆ ಎಂಬುದರ ಕಡೆ ಗಮನಹರಿಸಿ. ಅದನ್ನು ಬಿಟ್ಟು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ನಾಟಕವಾಡಿ ಮತ್ತೊಂದು ಹೊಸ ವಿವಾದ ಸೃಷ್ಟಿ ಮಾಡಬೇಡಿ ಎಂದು ರಾಜ್ಯ ನಾಯಕರಿಗೆ ಅತ್ಯಂತ ಕಠಿಣ ಪದಗಳಲ್ಲಿ ಸಂದೇಶ ರವಾನಿಸಿದೆ.
ವರಿಷ್ಠರ ಈ ತೀವ್ರ ಆಕ್ರೋಶ ಹಾಗೂ ಖಡಕ್ ಸೂಚನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಬಿಜೆಪಿ ನಾಯಕರು, ಧರ್ಮಸ್ಥಳದಲ್ಲಿ ನಡೆಸಲುದ್ದೇಶಿಸಿದ್ದ ಆಣೆ-ಪ್ರಮಾಣದ ರಾಜಕೀಯ ಮತ್ತು ಶಾಸಕಾಂಗ ಪಕ್ಷದ ಸಭೆಯಿಂದ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ.
