– ಟೈಟಲ್ ಬದಲಿಸಲು ಒತ್ತಾಯ
ಶ್ರದ್ಧಾ ಕಪೂರ್(Shraddha Kapoor) ಅಭಿನಯದ ‘ಈತಾ’ (Eetha Movie) ಚಿತ್ರದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ (Vithabai Narayangaonkar)ಕಾಣಿಸಿಕೊಂಡಿರುವುದು ಮೆಚ್ಚುಗೆಗೂ ಪಾತ್ರವಾಗಿದೆ. ಆದರೆ ಚಿತ್ರದ ಹೆಸರು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ಎನ್‌ಸಿಪಿಯ ಚಲನಚಿತ್ರ ಮತ್ತು ಸಾಂಸ್ಕೃತಿಕ ವಿಭಾಗದ ರಾಜ್ಯಾಧ್ಯಕ್ಷ ಬಾಬಾಸಾಹೇಬ್ ಪಾಟೀಲ್ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಹಾಗೂ ಮ್ಯಾಡಾಕ್ ಫಿಲ್ಮ್ಸ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಚಿತ್ರದ ಹೆಸರನ್ನು ‘ಈತಾ’ ಬದಲಾಗಿ ‘ವಿಠಾ’ ಅಥವಾ ‘ವಿಠಾಬಾಯಿ’ ಎಂದು ಇಡಬೇಕೆಂದು ಅವರು ಮನವಿ ಮಾಡಿದ್ದಾರೆ.
ವಿಠಾಬಾಯಿ ನರಾಯಣಗಾಂವ್ಕರ್ ಮಹಾರಾಷ್ಟ್ರದ ಹೆಮ್ಮೆಯ ಲಾವಣಿ ಮತ್ತು ತಮಾಶಾ ಕಲಾವಿದೆ. ರಾಷ್ಟ್ರಪತಿ ಪ್ರಶಸ್ತಿಯನ್ನೂ ಪಡೆದಿದ್ದರು. ಅವರಂತಹ ಮಹಾನ್ ಕಲಾವಿದೆಯ ಜೀವನಾಧಾರಿತ ಚಿತ್ರಕ್ಕೆ ಅವರ ನಿಜವಾದ ಹೆಸರೇ ಇರಬೇಕು ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕೆಲವರು ಪ್ರೀತಿಯಿಂದ ‘ಈತಾ’ ಎಂದು ಕರೆಯುತ್ತಿದ್ದರು. ಆದರೆ ದೇಶಾದ್ಯಂತ ಅವರು ವಿಠಾಬಾಯಿ ನರಾಯಣಗಾಂವ್ಕರ್ ಎಂದೇ ಪರಿಚಿತರಾಗಿದ್ದರು ಎಂದು ಪಾಟೀಲ್ ತಿಳಿಸಿದ್ದಾರೆ. ದೇಶದಾದ್ಯಂತ ಜನರು ಈ ಸಿನಿಮಾ ನೋಡಲಿದ್ದಾರೆ. ಮುಂದಿನ ಪೀಳಿಗೆಗೂ ಅವರ ನಿಜವಾದ ಹೆಸರೇ ಗೊತ್ತಾಗಬೇಕು. ‘ಈತಾ’ ಎಂಬ ಹೆಸರು ಗೊಂದಲ ಉಂಟು ಮಾಡಬಹುದು ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಮತ್ತು ಮ್ಯಾಡಾಕ್ ಫಿಲ್ಮ್ಸ್‌ಗೆ ಪತ್ರ ಕಳುಹಿಸಲಾಗಿದೆ. ವಾಟ್ಸ್‌ಆಪ್ ಮೂಲಕವೂ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ಆದರೆ ‘ವಿಠಾಬಾಯಿ’ ಎಂಬ ಶೀರ್ಷಿಕೆ ಈಗಾಗಲೇ ಮತ್ತೊಬ್ಬರ ಹೆಸರಲ್ಲಿ ನೋಂದಣಿಯಾಗಿರುವ ಕಾರಣ, ಅದನ್ನು ಪಡೆಯಲು ಚಿತ್ರತಂಡ ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ, ವಿಠಾಬಾಯಿ ಕುಟುಂಬದವರಿಂದ ಚಿತ್ರದ ಹಕ್ಕು ಪಡೆಯಲಿಲ್ಲ. ಅವರೊಂದಿಗೆ ಸರಿಯಾಗಿ ಚರ್ಚೆಯನ್ನೂ ನಡೆಸಲಿಲ್ಲ ಎಂದು ಪಾಟೀಲ್ ಆರೋಪಿಸಿದ್ದಾರೆ.ಇದನ್ನೂ ಓದಿ: ಹನುಮನ ಅವತಾರ ಧರಿಸೋಕೂ ಮುನ್ನ ರಿಷಬ್ ಮನೆಯಲ್ಲಿ ʻಶ್ರೀರಾಮ ಭಜನೆʼ ಮಹಾ ಮೇಳ
ಚಿತ್ರವು ವಿಠಾಬಾಯಿ ಕುರಿತ ಪುಸ್ತಕವನ್ನು ಆಧರಿಸಿದೆ ಎನ್ನಲಾಗಿದ್ದು, ಆ ಪುಸ್ತಕದಲ್ಲಿರುವ ಕೆಲವು ಮಾಹಿತಿಗಳಿಗೆ ಕುಟುಂಬ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ ಎಂದೂ ಅವರು ಹೇಳಿದ್ದಾರೆ.
ಇನ್ನೊಂದೆಡೆ, ವಿಠಾಬಾಯಿ ಅವರ ಮೊಮ್ಮಗ ಮೋಹಿತ್ ನರಾಯಣಗಾಂವ್ಕರ್ ಕೂಡ ಕುಟುಂಬಕ್ಕೆ ಚಿತ್ರದ ವಿರುದ್ಧ ಯಾವುದೇ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಅಜ್ಜಿಯ ಜೀವನದ ಮೇಲೆ ದೊಡ್ಡ ಸಿನಿಮಾ ಬರುತ್ತಿರುವುದು ಸಂತಸದ ವಿಚಾರ. ನಾವು ಚಿತ್ರವನ್ನು ಸ್ವಾಗತಿಸುತ್ತೇವೆ. ಆದರೆ ಚಿತ್ರದ ಹೆಸರಿನಲ್ಲಿ ವಿಠಾಬಾಯಿ ನರಾಯಣಗಾಂವ್ಕರ್ ಅಥವಾ ವಿಠಾ ನರಾಯಣಗಾಂವ್ಕರ್ ಎಂಬ ಹೆಸರು ಇರಬೇಕು ಎಂಬುದೇ ನಮ್ಮ ಬೇಡಿಕೆ, ಎಂದು ಅವರು ಹೇಳಿದ್ದಾರೆ.
ಸದ್ಯಕ್ಕೆ ಈ ವಿವಾದದ ಬಗ್ಗೆ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅಥವಾ ಮ್ಯಾಡಾಕ್ ಫಿಲ್ಮ್ಸ್ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇದನ್ನೂ ಓದಿ: ಅನಿರುದ್ಧ್ – ಕಾವ್ಯಾ ಮಾರನ್ ಮದುವೆ ಫಿಕ್ಸ್? – ಕುಟುಂಬ ಸದಸ್ಯರಿಂದಲೇ ಸಿಕ್ತು ಸುಳಿವು
