– ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ
– ಬೂತ್ವಾರು ಕೈಬಿಟ್ಟ ಮತದಾರರ ಪಟ್ಟಿ ಪ್ರಕಟಿಸಲು ಸೂಚನೆ
ನವದೆಹಲಿ: ಎಸ್ಐಆರ್ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರಿಗೆ ಮತ್ತೊಂದು ಅವಕಾಶ ಕಲ್ಪಿಸಿ ಕೇಂದ್ರ ಚುನಾವಣಾ ಆಯೋಗ ಮಹತ್ವದ ಆದೇಶ ಹೊರಡಿಸಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ವೋಟರ್ಸ್ಗೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಲು ಹೊಸ ಅವಕಾಶ ನೀಡಲಾಗಿದೆ.
ಗೈರು, ಸ್ಥಳಾಂತರ, ಮೃತಪಟ್ಟವರು ಹಾಗೂ ನಕಲಿ ಮತದಾರರು ಎಂದು ಗುರುತಿಸಲ್ಪಟ್ಟವರಿಗೂ ಮತ್ತೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಮತದಾರರ ಪಟ್ಟಿಯಿಂದ ಕೈಬಿಟ್ಟವರ ಬೂತ್ವಾರು ಪಟ್ಟಿಯನ್ನ ಮತ್ತೊಮ್ಮೆ ಪ್ರಕಟಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಈ ಪಟ್ಟಿಗಳನ್ನ ಮತಗಟ್ಟೆಗಳು, ಪಂಚಾಯಿತಿಗಳೂ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಪ್ರದರ್ಶಿಸಬೇಕು. ಅಲ್ಲದೇ, ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ನಲ್ಲಿಯೂ ಓದಲು ಸಾಧ್ಯವಾಗುವ ಪಿಡಿಎಫ್ ರೂಪದಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿದೆ. ಈ ಆದೇಶವು ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಗಳು ಹಾಗೂ ದೆಹಲಿ ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗಲಿದೆ.
ಗಣತಿ ನಮೂನೆ ಸಲ್ಲಿಸಲು ಅವಕಾಶ
ಸಂಬಂಧಪಟ್ಟ ಮತದಾರರಿಗೆ ಹೊಸದಾಗಿ ಗಣತಿ ನಮೂನೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳ (ಬಿಎಲ್ಎ) ಸಹಕಾರವನ್ನೂ ಪಡೆಯಬೇಕು ಎಂದು ಆಯೋಗ ನಿರ್ದೇಶಿಸಿದೆ.
ವಾಟ್ಸಪ್, ಇ-ಮೇಲ್ ಹಾಗೂ ಎಸ್ಎಂಎಸ್ ಮೂಲಕವೂ ಗಣತಿ ನಮೂನೆಗಳನ್ನು ಮತದಾರರಿಗೆ ತಲುಪಿಸಬಹುದು. ಇಸಿಐನೆಟ್ ಆ್ಯಪ್ ಮತ್ತು ಚುನಾವಣಾ ಆಯೋಗದ ವೆಬ್ಸೈಟ್ನಿಂದಲೂ ನಮೂನೆ ಡೌನ್ಲೋಡ್ ಮಾಡಿಕೊಂಡು ಸಲ್ಲಿಸಲು ಅವಕಾಶವಿದೆ ಎಂದು ಆಯೋಗ ಹೇಳಿದೆ.
ಸ್ಥಳಾಂತರಗೊಂಡ ಮತದಾರರಿಗೆ ಪ್ರತ್ಯೇಕ ಅವಕಾಶ
ಈ ಹಿಂದೆ ವಾಸವಿದ್ದ ಸ್ಥಳದಲ್ಲಿಯೇ ಇರುವ ಮತದಾರರು ಗಣತಿ ನಮೂನೆಯೊಂದಿಗೆ ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿರುವ ಕಾರಣವನ್ನು ವಿವರಿಸುವ ಹೇಳಿಕೆ ಸಲ್ಲಿಸಬೇಕು. ರಾಜ್ಯದೊಳಗೆ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡವರು ಹೊಸ ವಿಳಾಸದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸ್ಥಳಾಂತರಗೊಂಡವರು ಫಾರ್ಮ್-8 ಸಲ್ಲಿಸುವ ಅಗತ್ಯವಿಲ್ಲ. ಇನ್ನೂ ವಸತಿ ರಹಿತರಿಗೆ ವಿಳಾಸದ ದಾಖಲೆಗಳು ಲಭ್ಯವಿಲ್ಲದಿದ್ದರೆ, ಬಿಎಲ್ಒ ಸಲ್ಲಿಸುವ ಪರಿಶೀಲನಾ ವರದಿಯನ್ನೇ ಪರಿಗಣಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಈಗಾಗಲೇ ಎಸ್ಐಆರ್ ಪ್ರಕ್ರಿಯೆಯಲ್ಲಿ ಹೊಸ ನೋಂದಣಿಗಾಗಿ ಫಾರ್ಮ್-6 ಸಲ್ಲಿಸಿರುವವರು ಮತ್ತೊಮ್ಮೆ ಗಣತಿ ನಮೂನೆ ಸಲ್ಲಿಸುವ ಅಗತ್ಯವಿಲ್ಲ. ಮತದಾರರ ಅರ್ಹತೆ ಮತ್ತು ವಿಳಾಸವನ್ನು ಪರಿಶೀಲಿಸಿದ ಬಳಿಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗುತ್ತದೆ. ಈ ಹಿಂದೆ ನೀಡಲಾಗಿದ್ದ ಅದೇ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಮರುನೀಡುವಂತೆಯೂ ಆಯೋಗ ಸೂಚಿಸಿದೆ.

