– ವಿದ್ಯುತ್ ಉತ್ಪಾದನೆ, ಉಪ್ಪುನೀರಿನ ಸಂಸ್ಕರಣಾ ಘಟಕಗಳು ಟಾರ್ಗೆಟ್
– ಪ್ರತೀಕಾರದ ದಾಳಿ ಎಚ್ಚರಿಕೆ ಕೊಟ್ಟ ಇರಾನ್
ಅಂಕಾರ: ಇರಾನ್ ಯುದ್ಧ ಮುಂದುವರಿಸಿದ್ರೆ ತನ್ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಎದುರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಅಂಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆ ಸಮಯದಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಅಮೆರಿಕ ಮತ್ತೊಂದು ಸುತ್ತಿನ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಹೇಳಿದ್ದಾರೆ.

ಸಂಘರ್ಷ ಮತ್ತಷ್ಟು ಹೆಚ್ಚಾದರೆ, ಇರಾನ್‌ನ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಲಿದೆ. ಅದರಲ್ಲಿ ಪ್ರಮುಖವಾಗಿ ವಿದ್ಯುತ್ ಉತ್ಪಾದನೆ ಮತ್ತು ಉಪ್ಪುನೀರಿನ ಸಂಸ್ಕರಣಾ ಘಟಕಗಳು ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಲಾಗುವುದು. ಇದರೊಂದಿಗೆ ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾದ ಖಾರ್ಗ್ ದ್ವೀಪವನ್ನೂ ಅಮೆರಿಕ ವಶಪಡಿಸಿಕೊಳ್ಳಲಿದೆ. ಈ ಹಿಂದೆ ದಾಳಿ ಮಾಡಿದಾಗಲೂ ತೈಲ ಸೌಲಭ್ಯಗಳಿಗೆ ಹಾನಿ ಮಾಡಿರಲಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಈ ಬಾರಿ ಬಹುಶಃ ನಾವು ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಬಹುದು. ಇರಾನ್ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಅಮೆರಿಕ ಅಧ್ಯಕ್ಷರು.
ಇರಾನ್‌ನಿಂದ ಪ್ರತೀಕಾರದ ದಾಳಿ ಎಚ್ಚರಿಕೆ
ಇನ್ನೂ ಟ್ರಂಪ್ ದಾಳಿ ಎಚ್ಚರಿಕೆಗೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ಇರಾನ್, ಪ್ರತಿಕಾರ ತೀರಿಸಿಕೊಳ್ಳುವ ಎಚ್ಚರಿಕೆ ಕೊಟ್ಟಿದೆ. ಅಮೆರಿಕ ಶಾಂತಿ ಒಪ್ಪಂದವನ್ನು ಮುರಿದು, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. ಯಾವುದೇ ಆಕ್ರಮಣಕಾರಿ ಕೃತ್ಯ ನಡೆದರೂ ತಕ್ಷಣವೇ ಪ್ರತಿಕ್ರಿಯೆ ನೀಡಲಾಗುವುದು. ಇದನ್ನು ಅಮೆರಿಕ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದೆ.
