ಬೆಂಗಳೂರು: ರೈತರ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. ಇದು ಕೂಡ ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಕೃಷಿ ಪಂಡಿತ ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಿಳಿಸಿದರು.
Advertisement
ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡೈರೆಕ್ಟರೇಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ರಚನೆ ಕುರಿತ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಕರ್ನಾಟಕದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ನನಸು ಮಾಡಲು ಹೊರಟಿದೆ. ರಾಜ್ಯದಲ್ಲಿ ಡೈರೆಕ್ಟರೇಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ಯೋಜನೆ ಮೂಲಕ ಕೃಷಿ ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗುಡಿ ಕೈಗಾರಿಕೆ ಮೂಲಕ ರೈತರಿಗೆ ಹೆಚ್ಚಿನ ಆದಾಯ, ಉದ್ಯೋಗ ಹೆಚ್ಚಳ ಸಾಧ್ಯವಾಗಿದೆ. ಕೃಷಿ ಉಪ ಉತ್ಪನ್ನಗಳ ತಯಾರಿಕೆಯೂ ಸಾಧ್ಯವಾಗುತ್ತಿದೆ. ಆತ್ಮನಿರ್ಭರ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳನ್ನು ರಚಿಸಲು ಸೆಕೆಂಡರಿ ಡೈರೆಕ್ಟರೇಟ್ ನೆರವಾಗಲಿದೆ. ಇದರಡಿ ಘಟಕಕ್ಕೆ ಪಡೆದ ಸಾಲಕ್ಕೆ ಶೇ.35ರಷ್ಟು ಸಬ್ಸಿಡಿ ಸಿಗಲಿದೆ. ಅಲ್ಲದೆ ರಾಜ್ಯ ಸರ್ಕಾರವು ಶೇ.15 ಸಬ್ಸಿಡಿ ನೀಡಲಿದ್ದು, ಒಟ್ಟು ಶೇ.50 ಸಬ್ಸಿಡಿ ಸಿಗಲಿದೆ ಎಂದು ನುಡಿದರು. ಇದನ್ನೂ ಓದಿ: ಗಳಿಗೆ ತೇರು ಎಳೆಯುವ ಮುನ್ನ ಕುರಾನ್ ಪಠಣ ಮಾಡುವ ಸಂಪ್ರದಾಯವಿದೆ: ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ
Advertisement
ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಮಕ್ಕಳಿಗೆ ಕೃಷಿ ಕಾಲೇಜು ಸೇರಲು ಶೇ.40ರಷ್ಟು ಮೀಸಲಾತಿ ಇತ್ತು. 2021ರಲ್ಲಿ ಶೇ.50ಕ್ಕೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ 186 ಜನ ರೈತರ ಮಕ್ಕಳಿಗೆ ಹೆಚ್ಚುವರಿ ಸೀಟು ಲಭಿಸಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ರೈತ ವಿದ್ಯಾನಿಧಿ ಆರಂಭ ಮಾಡಿದ್ದು, ಇದರಿಂದ 7.13 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರೂ.261 ಕೋಟಿ ವಿದ್ಯಾರ್ಥಿವೇತನ ಸಿಕ್ಕಿದೆ. ಇದು ಕೂಡ ದೇಶದಲ್ಲೇ ಮೊದಲು. ಇದರಲ್ಲಿ ಜಾತಿ ಧರ್ಮದ ಭೇದ ಇಲ್ಲ. ಕರ್ನಾಟಕದಲ್ಲಿ ಒಟ್ಟು 742 ರೈತ ಸಂಪರ್ಕ ಕೇಂದ್ರಗಳಿದ್ದು, ಅದರಲ್ಲಿ 694 ಕೃಷಿ ಯಾಂತ್ರೀಕರಣ ಕೇಂದ್ರಗಳನ್ನು ಸ್ಥಾಪಿಸಿ 22 ಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆಗೆ ಕೊಡಲಾಗುತ್ತಿದೆ. ಟ್ರ್ಯಾಕ್ಟರ್ ಮತ್ತಿತರ ಉಪಕರಣ ಇಲ್ಲದ ರೈತರಿಗೆ ಇದರಿಂದ ಪ್ರಯೋಜನ ಸಿಗುತ್ತಿದೆ. ಕೃಷಿ ಯಂತ್ರೋಪಕರಣ ಬ್ಯಾಂಕ್ ಕೂಡ ಆರಂಭವಾಗಿದೆ ಎಂದರು.
Advertisement
Advertisement
ರಾಜ್ಯದಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ. 50 ಸಾವಿರ ಮೆಟ್ರಿಕ್ ಟನ್ ಗೊಬ್ಬರವನ್ನು ಈ ವರ್ಷಕ್ಕಾಗಿ ನಾವು ದಾಸ್ತಾನು ಮಾಡಿದ್ದೇವೆ. ಯೂರಿಯಾ 30 ಸಾವಿರ ಮೆಟ್ರಿಕ್‍ಟನ್ ಇದ್ದು, ಡಿಎಪಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಸೂಕ್ಷ್ಮ ನೀರಾವರಿಗೂ ಆದ್ಯತೆ ಕೊಡುತ್ತಿದ್ದು, ನೆರವು ನೀಡಲಾಗುತ್ತಿದೆ. ರಿವಾರ್ಡ್ ರಿಜುವನೇಟಿಂಗ್ ವಾಟರ್‍ಶೆಡ್ ಫಾರ್ ಅಗ್ರಿಕಲ್ಚರ್ ಯೋಜನೆಯು ಕರ್ನಾಟಕಕ್ಕೆ ಸಿಕ್ಕಿದ್ದು, ರಾಜ್ಯದ 21 ಜಿಲ್ಲೆಗಳಲ್ಲಿ 600 ಕೋಟಿ ವೆಚ್ಚದಡಿ ಮುಂದಿನ 5 ವರ್ಷಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ನ್ಯೂ ಜನರೇಷನ್ ವಾಟರ್‍ಶೆಡ್ ಯೋಜನೆಯಡಿ 642 ಕೋಟಿ ಮೊತ್ತವನ್ನು 51 ತಾಲೂಕುಗಳಲ್ಲಿ ಖರ್ಚು ಮಾಡುತ್ತಿದ್ದೇವೆ. ಕಳಪೆ ರಸಗೊಬ್ಬರ, ಕಳಪೆ ಬಿತ್ತನೆ ಬೀಜ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಜಾಗೃತ ದಳವನ್ನು ಪೊಲೀಸ್ ಮಾದರಿಯಲ್ಲಿ ಜಾಗೃತಗೊಳಿಸಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಸೀದಿಯಿಂದ ಧ್ವನಿವರ್ಧಕ ತೆಗೆಸುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ: ಸಂಜಯ್ ನಿರುಪಮ್
ಈ ಬಾರಿ ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕೃಷಿ ಕಾಲೇಜು ಆರಂಭವಾಗಲಿದೆ. 2020-21ರಲ್ಲಿ ರಾಜ್ಯವು ಕೋವಿಡ್ ಸಂಕಷ್ಟದಲ್ಲಿದ್ದರೂ 160.55 ಲಕ್ಷ ಮೆಟ್ರಿಕ್ ಟನ್ ಆಹಾರವನ್ನು ಉತ್ಪಾದಿಸಲಾಗಿದೆ. ಇದು ಹಿಂದಿನ ವರ್ಷದ ಉತ್ಪಾದನೆಯಲ್ಲಿ ಶೇ.10ರಷ್ಟು ಹೆಚ್ಚಳದ ಸಾಧನೆಯಾಗಿದೆ. ಕೃಷಿಕರು ಕೋವಿಡ್ ಇದ್ದರೂ ಹಿಂದೆ ಸರಿಯದೆ ಇದ್ದುದಕ್ಕೆ ಇದು ಉದಾಹರಣೆ ಎಂದು ಮಾಹಿತಿ ನೀಡಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನಾವು 2019-20ನೇ ಸಾಲಿನಲ್ಲಿ 7.32 ಲಕ್ಷ ಫಲಾನುಭವಿಗಳಿಗೆ 843 ಕೋಟಿ, 20-21ರಲ್ಲಿ 4.60 ಲಕ್ಷ ರೈತರಿಗೆ 580 ಕೋಟಿ ಬೆಳೆ ವಿಮಾ ಪರಿಹಾರ ಕೊಡಲಾಗಿದೆ. 2021ರ ಮುಂಗಾರು ಹಂಗಾಮಿನಲ್ಲಿ 48 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಬೆಳೆ ಹಾನಿಗೆ ಸಂಬಂಧಿಸಿ 25.15 ಕೋಟಿ ಬೆಳೆ ವಿಮೆ ಪರಿಹಾರವನ್ನು ಇತ್ಯರ್ಥ ಪಡಿಸಲಾಗಿದೆ ಎಂದು ವಿವರ ನೀಡಿದರು. ಇದನ್ನೂ ಓದಿ: ಪರ್ಸೆಂಟೇಜ್ ಕೊಡದಿದ್ದರೆ ಗುದ್ದಲಿ ಪೂಜೆನೂ ಮಾಡಲ್ಲ: ಸಿದ್ದಣ್ಣ ಶೇಗಜಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2020-21 ಸಾಲಿನಲ್ಲಿ ರಾಜ್ಯದಿಂದ 49.18 ಲಕ್ಷ ರೈತರಿಗೆ 983.71 ಕೋಟಿ ಹಣವನ್ನು ನೇರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. 2021-22ರಲ್ಲಿ ಇದುವರೆಗೆ 50,035 ರೈತರಿಗೆ 1,977 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ 2020-21 ಸಾಲಿನಲ್ಲಿ 52 ಲಕ್ಷಕ್ಕೂ ಹೆಚ್ಚು ರೈತರಿಗೆ 3,113 ಕೋಟಿ ಹಾಗೂ 2021-22ರಲ್ಲಿ 53 ಲಕ್ಷಕ್ಕೂ ಹೆಚ್ಚು ರೈತರಿಗೆ 2,809 ಕೋಟಿ ಹಣವನ್ನು ಇದುವರೆಗೆ ನೀಡಿದೆ ಎಂದರು.
2017ರವರೆಗೆ ಗ್ರಾಮಲೆಕ್ಕಿಗರು ಕಟ್ಟೆ ಮೇಲೆ ಕುಳಿತು ಬೆಳೆ ಸಮೀಕ್ಷೆ ನಡೆಸುತ್ತಿದ್ದರು. ಇದೀಗ ಜಿಪಿಎಸ್ ಅಳವಡಿಸಿ ಸಮೀಕ್ಷೆ ಮಾಡಲಾಗುತ್ತಿದೆ. 2020ರಲ್ಲಿ ನನ್ನ ಬೆಳೆ ನನ್ನ ಹಕ್ಕು ಕಾರ್ಯಕ್ರಮದ ಮೂಲಕ ರೈತರಿಂದಲೇ ಬೆಳೆ ಸಮೀಕ್ಷೆ ಮಾಡುತ್ತಿದ್ದು, 46 ಲಕ್ಷ ಪ್ಲಾಟ್‍ಗಳಲ್ಲಿ ರೈತರೇ ಬೆಳೆ ಸಮೀಕ್ಷೆ ಮಾಡಿದ್ದಾರೆ. ಇದರಿಂದ ಬೆಳೆ ಉತ್ಪಾದನೆ ಸಂಬಂಧ ಏರಿಳಿತದ ಸಮಸ್ಯೆ ಪರಿಹಾರವಾಗಿದ್ದು, ರೈತರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ನಂಜುಂಡೇಗೌಡ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.