ನವದೆಹಲಿ: ಸಿಇಸಿ ಜ್ಞಾನೇಶ್ ಕುಮಾರ್ (Gyanesh Kumar) ರಾಜೀನಾಮೆಗೆ ಆಗ್ರಹಿಸಿ ಒತ್ತಾಯಿಸಿ ಜಂತರ್ ಮಂತರ್ನಲ್ಲಿ ನಾಳೆ ಕಾಕ್ರೋಚ್ ಜನತಾ ಪಾರ್ಟಿ (CJP Protest) ನಡೆಸಲಿರುವ ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆಯ ಕುರಿತು ಜಂಟಿ ಪೊಲೀಸ್ ಆಯುಕ್ತರಾದ ನೂಪುರ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅ.7 ರಂದು ಸಿಜೆಪಿ ಸಹ-ಸಂಯೋಜಕ ಸೌರಭ್ ದಾಸ್ ಅವರು ನವದೆಹಲಿ ಜಿಲ್ಲಾಡಳಿತಕ್ಕೆ ಒಂದು ಅರ್ಜಿ ಸಲ್ಲಿಸಿದರು. ಮುಖ್ಯ ಚುನಾವಣಾ ಆಯುಕ್ತರ (CEC) ರಾಜೀನಾಮೆಗೆ ಆಗ್ರಹಿಸಿ ಅ.10 ರಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನು ನಡೆಸುವ ಕುರಿತು ಈ ಅರ್ಜಿಯಲ್ಲಿ ಮಾಹಿತಿ ನೀಡಲಾಗಿತ್ತು. ಈ ಮಾಹಿತಿಯನ್ನು ಪರಿಶೀಲಿಸಿದಾಗ, ಕಾರ್ಯಕ್ರಮಕ್ಕೆ ಬಹಳ ಕಡಿಮೆ ಸಮಯವಿದ್ದಾಗ ಈ ಸೂಚನೆಯನ್ನು ನೀಡಲಾಗಿದೆ ಎಂಬುದು ಕಂಡುಬಂದಿದೆ. ಇದನ್ನೂ ಓದಿ: ಸಿಇಸಿ ಪ್ರತಿಭಟನೆಯಿಂದ ಭಾರೀ ಟ್ರಾಫಿಕ್ ಜಾಮ್ – 5000ಕ್ಕೂ ಅಧಿಕ ಪ್ರಯಾಣಿಕರಿಗೆ ಟ್ರೈನ್ ಮಿಸ್
ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ, ಜಂತರ್ ಮಂತರ್ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲು ನಿಗದಿತ ದಿನಾಂಕಕ್ಕಿಂತ ಕನಿಷ್ಠ 10 ದಿನಗಳ ಮುಂಚಿತವಾಗಿಯೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅಲ್ಲದೆ, ಹಿಂದೆ ಮತ್ತೊಂದು ಸಂದರ್ಭದಲ್ಲಿ CJP ನಡೆದುಕೊಂಡ ರೀತಿಯನ್ನು ಗಮನಿಸಿದ್ದೇವೆ. ಈ ಹಿಂದೆ ನೀಡಲಾಗಿದ್ದ ಲಿಖಿತ ಭರವಸೆಗಳು ಮತ್ತು ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸಿರಲಿಲ್ಲ. ನಿಗದಿತ ಕಾರ್ಯವಿಧಾನಗಳನ್ನು ಪಾಲಿಸದಿರುವುದು, ಹಿಂದಿನ ಕಾನೂನು ನಿರ್ದೇಶನಗಳನ್ನು ಅನುಸರಿಸದಿರುವುದು ಹಾಗೂ ಸಾರ್ವಜನಿಕ ಸುರಕ್ಷತೆ, ಕಾನೂನು-ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಜಂತರ್ ಮಂತರ್ನಲ್ಲಿ ಈಗ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ನವದೆಹಲಿ ಪ್ರದೇಶದಾದ್ಯಂತ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (BNSS) ಸೆಕ್ಷನ್ 163 ಜಾರಿಯಲ್ಲಿದೆ. ಸಾರ್ವಜನಿಕ ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಕಾಪಾಡಲು ಇದರ ಅಡಿಯಲ್ಲಿ ಸಮಂಜಸವಾದ ಮುನ್ನೆಚ್ಚರಿಕಾ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲದೆ, BNSS ಸೆಕ್ಷನ್ 163ರ ಉಲ್ಲಂಘನೆ, ಸಾರ್ವಜನಿಕ ಆಸ್ತಿಪಾಸ್ತಿಗಳ ಧ್ವಂಸ ಅಥವಾ ಹಾನಿಯು ನ್ಯಾಯಾಲಯಗಳು ಈ ಹಿಂದೆ ನೀಡಿರುವ ತೀರ್ಪುಗಳಿಗೆ ಅನುಗುಣವಾಗಿ ಸೂಕ್ತ ಕಾನೂನು ಕ್ರಮಕ್ಕೆ ಕಾರಣವಾಗುತ್ತದೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.

