ಬೆಳಗಾವಿ : ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರ ನ್ಯಾಯಸಮ್ಮತ ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ನಾಳೆ (ಶುಕ್ರವಾರ) ‘ಹುಕ್ಕೇರಿ ಪಟ್ಟಣ ಬಂದ್’ಗೆ ಅಧಿಕೃತವಾಗಿ ಕರೆ ನೀಡಿದೆ.
ರೈತ ಮುಖಂಡರಾದ ಚೂನಪ್ಪ ಪೂಜೇರಿ ಅವರು ಈ ಬಂದ್ ಕರೆ ನೀಡಿದ್ದು, ಸಾರ್ವಜನಿಕರು ಹಾಗೂ ವರ್ತಕರು ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಹುಕ್ಕೇರಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರೈತರು ಹಮ್ಮಿಕೊಂಡಿರುವ ಧರಣಿಯು ಎರಡನೇ ದಿನದ ರಾತ್ರಿಯೂ ಮುಂದುವರಿದಿದೆ. ರೈತ ಮುಖಂಡರಾದ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗೂರುಜಿ ಅವರ ನೇತೃತ್ವದಲ್ಲಿ ನೂರಾರು ರೈತರು ಹುಕ್ಕೇರಿ ಪಟ್ಟಣದ ಪ್ರಮುಖ ಕೇಂದ್ರವಾದ ಕೋರ್ಟ್ ವೃತ್ತದಲ್ಲಿ ಬೀಡುಬಿಟ್ಟು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ರೈತರ ಆಕ್ರೋಶದ ಬಿಸಿ ಸಾರಿಗೆ ಸಂಪರ್ಕಕ್ಕೂ ತಟ್ಟಿದ್ದು, ಪ್ರತಿಭಟನಾಕಾರರು ಗೋಕಾಕ – ಸಂಕೇಶ್ವರ ರಾಜ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದೆ. ರಸ್ತೆ ಮಧ್ಯೆಯೇ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರದ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ:
“ನಾವು ಕಳೆದ ಎರಡು ದಿನಗಳಿಂದ ಹಗಲು-ರಾತ್ರಿ ಎನ್ನದೆ ರಸ್ತೆಯಲ್ಲೇ ಕುಳಿತು ಹೋರಾಟ ಮಾಡುತ್ತಿದ್ದರೂ ಸರ್ಕಾರದ ಯಾವೊಬ್ಬ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಯಾಗಲಿ ಸ್ಥಳಕ್ಕೆ ಬಂದು ನಮ್ಮ ಅಹವಾಲು ಆಲಿಸಿಲ್ಲ. ಸರ್ಕಾರದ ಈ ಉಡಾಫೆ ಧೋರಣೆಯನ್ನು ಖಂಡಿಸಿ ನಾಳೆ ಹುಕ್ಕೇರಿ ಬಂದ್ ಆಚರಿಸಲಾಗುತ್ತಿದೆ” ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.
ಕೇವಲ ಬಾಯಿಮಾತಿನ ಭರವಸೆಗಳಿಗೆ ನಾವು ಜಗ್ಗುವುದಿಲ್ಲ. ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಕಾಮಗಾರಿ ತಕ್ಷಣವೇ ಆರಂಭಿಸುವಂತೆ ಸರ್ಕಾರದಿಂದ ಅಧಿಕೃತ ಆದೇಶದ ಪ್ರತಿ ನೀಡಿದರೆ ಮಾತ್ರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗುವುದು, ಇಲ್ಲದಿದ್ದರೆ ಹೋರಾಟ ಮತ್ತಷ್ಟು ಉಗ್ರ ರೂಪ ತಾಳಲಿದೆ ಎಂದು ರೈತರು ಕಡಾಖಂಡಿತವಾಗಿ ಪಟ್ಟು ಹಿಡಿದಿದ್ದಾರೆ.

