– 15 ದಿನಗಳ ಕಾಲ ನೀರು ಹರಿಸಿ
– ಸಭೆಯ ಬಳಿಕ CWRC ಆದೇಶ
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹತ್ವದ ಶಿಫಾರಸು ಮಾಡಿದ್ದು, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 12,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.
ಈ ಕುರಿತು ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.
ದೆಹಲಿಯಲ್ಲಿರುವ CWMA ಕಚೇರಿಯಲ್ಲಿ ಬೆಳಗ್ಗೆ ಅಧ್ಯಕ್ಷ ವಿನೀತ್ ಗುಪ್ತಾ ಅವರ ನೇತೃತ್ವದಲ್ಲಿ ಪ್ರಮುಖ ಸಭೆ ನಡೆಯಿತು. ಕರ್ನಾಟಕದ ಪರವಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (MD) ಮಹೇಶ್ ಅವರು ಖುದ್ದಾಗಿ ಹಾಜರಿದ್ದು ರಾಜ್ಯದಲ್ಲಿನ ಜಲಾಶಯಗಳ ನೀರಿನ ಮಟ್ಟ ಹಾಗೂ ವಸ್ತುಸ್ಥಿತಿಯನ್ನು ಪ್ರಾಧಿಕಾರದ ಮುಂದಿಟ್ಟಿದ್ದರು.
ತಮಿಳುನಾಡು ರಾಜ್ಯದ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಸುಮಾರು ಒಂದೂವರೆ ಗಂಟೆಗಳ ನಡೆದ ಸಭೆಯಲ್ಲಿ ಭವಿಷ್ಯದ ಮಳೆ, ಈಗ ಜಲಾಶಯದಲ್ಲಿರುವ ನೀರಿನ ಸಂಗ್ರಹ ಎಲ್ಲವನ್ನು ಗಮನದಲ್ಲಿಟ್ಟುಕೊಂಡು CWRC ಈ ಶಿಫಾರಸು ಮಾಡಿದೆ.
ನಿನ್ನೆಯವರೆಗೆ ಅಂದರೆ ಆಗಸ್ಟ್ 10 ವರದಿಯಂತೆ ತಮಿಳುನಾಡು ಗಡಿಯಾದ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಈಗಾಗಲೇ 9 ಟಿಎಂಸಿ ನೀರು ಹರಿದು ಹೋಗಿರುವುದು ದಾಖಲಾಗಿದೆ. CWRC ಹೊಸ ಶಿಫಾರಸಿನಂತೆ ಮುಂದಿನ 15 ದಿನಗಳ ಕಾಲ ದಿನಕ್ಕೆ 12,000 ಕ್ಯೂಸೆಕ್‌ನಂತೆ ನೀರು ಹರಿಸಿದರೆ ತಮಿಳುನಾಡಿಗೆ ಹರಿಯುವ ಒಟ್ಟು ನೀರಿನ ಪ್ರಮಾಣ 16 ಟಿಎಂಸಿಗೆ ತಲುಪಲಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಪ್ರಾಧಿಕಾರದ ಸಭೆಯಲ್ಲಿ CWRC ಶಿಫಾರಸನ್ನು CWMA ಎಷ್ಟರಮಟ್ಟಿಗೆ ಪುರಸ್ಕರಿಸಲಿದೆ ಹಾಗೂ ಕರ್ನಾಟಕ ತನ್ನ ಹಿತರಕ್ಷಣೆಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

