– 30 ವರ್ಷಗಳ ಸರಾಸರಿಗೆ ಹೋಲಿಸಿದ್ರೆ 53.88% ಒಳಹರಿವು ಕೊರತೆ
– ನಾಳೆಯಿಂದ 15 ದಿನ ನೀರು ಹರಿಸಲು ಸೂಚನೆ
ನವದೆಹಲಿ: ತಮಿಳುನಾಡಿಗೆ ಕಾವೇರಿ ನದಿಯಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿದ್ದ ಶಿಫಾರಸನ್ನ ಪ್ರಾಧಿಕಾರ ಎತ್ತಿಹಿಡಿದಿದ್ದು, ನವೆಂಬರ್ 7 ರಿಂದ ಮುಂದಿನ 15 ದಿನಗಳವರೆಗೆ ನೀರು ಹರಿಸುವಂತೆ ಸೂಚಿಸಿದೆ.
ಇಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ವಾದಗಳನ್ನು ಮಂಡಿಸಿದ್ದವು. ಎರಡೂ ರಾಜ್ಯಗಳ ವಾದಗಳನ್ನು ಪರಿಗಣಿಸಿದ ಸಮಿತಿ, ಬಿಳಿಗುಂಡ್ಲು ಅಣೆಕಟ್ಟಿನಲ್ಲಿ ಪ್ರತಿದಿನ 3,000 ಕ್ಯೂಸೆಕ್ ನೀರಿನ ಹರಿವು ಖಚಿತಪಡಿಸುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಮುಂದಿನ 15 ದಿನಗಳ ಅವಧಿಯಲ್ಲಿ ಒಟ್ಟು 3.88 ಟಿಎಂಸಿ ನೀರು ಹರಿಯುವಂತೆ ನೋಡಿಕೊಳ್ಳಲು ಶಿಫಾರಸು ಮಾಡಿತ್ತು.
ಕರ್ನಾಟಕವು ರಾಜ್ಯದ ಜಲಾಶಯಗಳಿಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಬರ ಪರಿಸ್ಥಿತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಕಾವೇರಿ ಜಲಾನಯನ ಪ್ರದೇಶದ 56 ತಾಲೂಕುಗಳ ಪೈಕಿ 55 ತಾಲೂಕುಗಳು ಬರಪೀಡಿತವಾಗಿವೆ. ರಾಜ್ಯದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಿಗೆ ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ.53.88 ರಷ್ಟು ಒಳಹರಿವು ಕೊರತೆಯಾಗಿದೆ ಎಂದು ಸಭೆಗೆ ತಿಳಿಸಿತ್ತು.
ಜುಲೈ 29ರಿಂದ ನವೆಂಬರ್ 6ರವರೆಗೆ ಬಿಳಿಗುಂಡ್ಲುವಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಸುಮಾರು 2.28 ಟಿಎಂಸಿ ನೀರು ಹರಿದಿದೆ ಎಂದು ಕರ್ನಾಟಕ ವಾದಿಸಿತ್ತು. ತಮಿಳುನಾಡಿನಲ್ಲಿ ಈಶಾನ್ಯ ಮುಂಗಾರು ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಶೇ.23ರಷ್ಟು ಹೆಚ್ಚಿದ್ದು, ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ ನವೆಂಬರ್ 5ರಂದು ಒಟ್ಟು 37.125 ಟಿಎಂಸಿ ನೀರಿನ ಸಂಗ್ರಹವಿತ್ತು. ಹೀಗಾಗಿ ತಮಿಳುನಾಡಿನ ಸಾಂಬಾ ಬೆಳೆಗಳಿಗೆ ಡಿಸೆಂಬರ್ 15ರವರೆಗೆ ನೀರಿನ ಅಗತ್ಯವನ್ನು ಪೂರೈಸಲು ಸಾಧ್ಯವಿದೆ ಎಂದು ಕರ್ನಾಟಕ ಪ್ರತಿಪಾದಿಸಿತ್ತು.
ಇನ್ನೊಂದೆಡೆ, ತಮಿಳುನಾಡು ತನ್ನ ಪಾಲಿನ ನೀರಿನಲ್ಲಿ ಕೊರತೆಯಾಗಿದೆ ಎಂದು ವಾದಿಸಿತ್ತು. ನವೆಂಬರ್ 4ರ ವರೆಗೆ 16.895 ಟಿಎಂಸಿ ನೀರಿನ ಬಾಕಿ ಇದೆ ಎಂದು ಹೇಳಿದ್ದಲ್ಲದೇ, ನವೆಂಬರ್ 5 ರಿಂದ 21ರ ವರೆಗೆ ಬಿಳಿಗುಂಡ್ಲುವಿನಲ್ಲಿ 20.678 ಟಿಎಂಸಿ ನೀರು ಲಭ್ಯವಾಗುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿತ್ತು. ಸಾಂಬಾ ಬೆಳೆಗಳಿಗೆ ತಕ್ಷಣ ನೀರಾವರಿ ಅಗತ್ಯವಿದೆ ಎಂದೂ ತಿಳಿಸಿತ್ತು.
ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ, ನವೆಂಬರ್ 7ರ ಬೆಳಿಗ್ಗೆ 8 ಗಂಟೆಯಿಂದ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಬಿಳಿಗುಂಡ್ಲುವಿನಲ್ಲಿ ತಲುಪುವಂತೆ ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಸೂಚಿಸಿತ್ತು. ಇದೀಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಈ ಶಿಫಾರಸನ್ನು ಎತ್ತಿಹಿಡಿದಿದೆ.

