ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K Shivakumar) ಅವರ ನೇತೃತ್ವದ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ಎರಡೇ ದಿನದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಖಾತೆ ಹಂಚಿಕೆ ವಿಚಾರದಲ್ಲಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರ ರಾಜೀನಾಮೆ ಪ್ರಹಸನ ಮುಂದುವರಿದಿದೆ. ಇದರ ಬೆನ್ನಲ್ಲೇ ರಾಮಲಿಂಗಾರೆಡ್ಡಿಯವರು ಮಾತನಾಡಿ, ನನ್ನ ನಿರ್ಧಾರ ಈಗಾಗಲೇ ತಿಳಿಸಿದ್ದೇನೆ, ಏನ್ ಮಾಡ್ತಾರೆ ನೋಡೋಣ ಎಂದು ತಿಳಿಸಿದ್ದಾರೆ.
ತಡರಾತ್ರಿಯವರೆಗೂ ರಾಮಲಿಂಗಾರೆಡ್ಡಿ ಮನವೊಲಿಸುವ ಪ್ರಯತ್ನವನ್ನು ಸಿಎಂ ಡಿ.ಕೆ ಶಿವಕುಮಾರ್ ಮಾಡಿದ್ದರು. ಕೆ.ಸಿ ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲಾ ಅವರಿಂದಲೂ ಮಾತನಾಡಿಸಿದ್ದರು. ಇದಾದ ಬಳಿಕ ಇಂದು ನಿರ್ಧಾರ ತಿಳಿಸ್ತೀನಿ ಎಂದು ರಾಮಲಿಂಗಾರೆಡ್ಡಿಯವರು ತಿಳಿಸಿ ಬಂದಿದ್ದರು. ಇದನ್ನೂ ಓದಿ: ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್? – ಸಿಎಂ ಡಿಕೆಶಿ ಸಂಧಾನ ಸಕ್ಸಸ್ ಆಯ್ತಾ?
ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ:
ಬೆಳಗ್ಗೆ ತಮ್ಮ ನಿವಾಸಕ್ಕೆ ಬೆಂಬಲಿಗರನ್ನ ರೆಡ್ಡಿ ಅವರು ಕರೆಸಿಕೊಂಡಿದ್ದಾರೆ. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಸೇರಿ ಹಲವರು ನಿವಾಸಕ್ಕೆ ಬಂದಿದ್ದಾರೆ. ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ತಿರ್ಮಾನ ತಿಳಿಸುವ ಸಾಧ್ಯತೆ ಇದೆ.
ಕೊರಮಂಗಲ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿ ಬಳಿಕ ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಮಲಿಂಗಾ ರೆಡ್ಡಿ ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಬಹುತೇಕ ವಾಪಸ್ ಪಡೆದಿದ್ದಾರೆ ಎಂದು ಮೂಲಗಳು ಹೇಳುತ್ತಿದ್ದರೂ, ಇನ್ನೂ ಅಧಿಕೃತಗೊಂಡಿಲ್ಲ. ಅಲ್ಲದೇ ಸಿಎಂ ಮನವೊಲಿಕೆಗೆ ಒಪ್ಪಿ ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುತ್ತಾರಾ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಇದನ್ನೂ ಓದಿ: ರಾಜೀನಾಮೆ ಕೊಟ್ಟ ರಾಮಲಿಂಗಾರೆಡ್ಡಿ ಭೇಟಿಯಾದ ಸಿಎಂ – ಮನವೊಲಿಕೆಗೆ ಯತ್ನ
