ಬೆಂಗಳೂರು: ರಾಜ್ಯ ಬಜೆಟ್ ತುಂಬಿದ ಕೊಡವೇ ಹೊರತು ಖಾಲಿ ಚೊಂಬು ಅಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸಮರ್ಥಿಸಿಕೊಂಡಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ಕೊಟ್ಟ ಸಿಎಂ, ವಿರೋಧ ಪಕ್ಷದವರು ಬಜೆಟ್‌ನ್ನು ಟೀಕಿಸುವಾಗ ಖಾಲಿ ಚೊಂಬು ಎಂದು ಹೇಳಿದ್ದಾರೆ. ಆದರೆ ನಾನು ಮಂಡಿಸಿರುವ 17ನೇ ಬಜೆಟ್ ಕರ್ನಾಟಕಕ್ಕೆ ಖಾಲಿ ಚೊಂಬಲ್ಲ. ಭರ್ತಿ ಚೊಂಬು, ತುಂಬಿದ ಕೊಡ ಅಂದ್ರು. ಆಗ ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಇದನ್ನೂ ಓದಿ: ರಾಹು, ಗುಳಿಕ, ಯಮಗಂಡ ಕಾಲ ನೋಡಿಕೊಂಡು ನಾನು ಬಜೆಟ್ ಮಂಡಿಸಲ್ಲ – ಸಿಎಂ
ಕೇಂದ್ರದ ಬಜೆಟ್ ಬಗ್ಗೆ ಮಾತನಾಡುವಾಗ ನಾನು ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ಟೀಕಿಸಿದ್ದೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯವರು ರಾಜ್ಯದ ಬಜೆಟ್ ಬಗ್ಗೆ ಖಾಲಿ ಚೊಂಬು ಎಂದಿದ್ದಾರೆ. ಮಾವು, ಬೇವು ಆಗಲ್ಲ, ಬೇವು ಮಾವು ಆಗಲ್ಲ. ವಿಪಕ್ಷದವರು ಬಜೆಟ್ ಟೀಕೆ ಮಾಡಿದ ಮಾತ್ರಕ್ಕೆ ಮಾವಿನ ಹಣ್ಣು ಬೇವಿನ ಹಣ್ಣಾಗಲು ಸಾಧ್ಯವಿಲ್ಲ. ಟೀಕೆ ಮಾಡಿದ ಮಾತ್ರಕ್ಕೆ ಬಜೆಟ್ ಗಂಭೀರತೆ ಹಾಳಾಗಲ್ಲ. ನಾಡಿನ ಜನರು ಬುದ್ಧಿವಂತರು. ಮಾವಿನ ಹಣ್ಣನ್ನು ಮಾವಿನ ಹಣ್ಣೆಂದೇ ಭಾವಿಸುತ್ತಾರೆ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕ ಅಶೋಕ್ ಮಾತನಾಡಿ, ಮಾವಿನ ಹಣ್ಣಿನಲ್ಲಿ ಹುಳಿ ಬಂದಿದೆ ಎಂದು ಹೇಳಿದ್ದೆ ಎಂದಾಗ, ಸಿದ್ದರಾಮಯ್ಯ ಹುಳಿ ಬಂದಿದೆ ಎಂದು ಹೇಳಿಲ್ಲ. ಸಾಲವನ್ನು ಹೇಳಿದ್ದೀರಾ, ಬಜೆಟ್ ಆಕ್ಸಿಜನ್ ಮೇಲಿದೆ, ಕ್ರೆಡಿಟ್ ಕಾರ್ಡ್ ಬಜೆಟ್, ಆಕ್ಸಿಜನ್ ಬಜೆಟ್ ಎಂದೆಲ್ಲಾ ಟೀಕಿಸಿದ್ದೀರಿ ಅಂತ ಸಿಎಂ ಟಕ್ಕರ್ ಕೊಟ್ರು. ವಿಪಕ್ಷ ನಾಯಕರು ಬಜೆಟ್ ಬಗ್ಗೆ ಆಳವಾದ ಅಧ್ಯಯನ ಮಾಡಿಲ್ಲ. ಒಂದು ವೇಳೆ ಮಾಡಿದ್ದರೆ ಬಜೆಟ್‌ನ ತಿರುಳು ಗೊತ್ತಾಗುತ್ತದೆ. ಬಜೆಟ್ ಮೇಲೆ ಪತ್ರಿಕೆಗಳು, ವಿವಿಧ ಕ್ಷೇತ್ರಗಳ ತಜ್ಞರು, ಉದ್ಯಮಿಗಳು ತಮ ಅಭಿಪ್ರಾಯ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ. ಈ ಬಜೆಟ್‌ನಲ್ಲಿ ಕಳೆದ ಸಲಕ್ಕಿಂತ 38,455 ಕೋಟಿ ರೂ. ಹೆಚ್ಚಳವಾಗಿದೆ. ಶೇ.9.4ರಷ್ಟು ಬೆಳವಣಿಗೆಯಾಗಿದೆ. ಆರ್ಥಿಕವಾಗಿ ಮುಗ್ಗಟ್ಟು ಇದ್ದರೆ ಈ ಬೆಳವಣಿಗೆ ಆಗುತ್ತಿರಲಿಲ್ಲ. ಆದರೆ ಕೇಂದ್ರ ಸರ್ಕಾರದ ಗಾತ್ರ ಶೇ.5.6ರಷ್ಟಿದೆ. ಕರ್ನಾಟಕದ ಜಿಎಸ್ಡಿಪಿ 2026-27ನೇ ಸಾಲಿಗೆ 33,05,500 ಕೋಟಿ ರೂ.ಗಳಾಗಿವೆ. ಇದರ ಬೆಳವಣಿಗೆ ದರ ಶೇ.8.1ರಷ್ಟಿದೆ. ಆದರೆ ಭಾರತದ ಸರ್ಕಾರದ ಜಿಎಸ್ಡಿಪಿ ಬೆಳವಣಿಗೆ ದರ ಶೇ.7.4ರಷ್ಟಿದೆ. ಕರ್ನಾಟಕ ಸರ್ಕಾರದ ಬೆಳವಣಿಗೆ ದರ ಭಾರತ ಸರ್ಕಾರಕ್ಕಿಂತ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಶಿಸ್ತಿಗೆ ವಿತ್ತೀಯ ಕೊರತೆಯು ಶೇ.3ರೊಳಗಿರಬೇಕು. ಒಟ್ಟು ಸಾಲವು ಶೇ.25ರ ಜಿಡಿಪಿಯನ್ನು ಮೀರಬಾರದು ಎಂಬ ಆರ್ಥಿಕ ಶಿಸ್ತಿನ ಮಾನದಂಡಗಳನ್ನು ರಾಜ್ಯ ಸರ್ಕಾರ ಪಾಲಿಸಿದೆ. ವಿತ್ತೀಯ ಕೊರತೆ ಶೇ.2.95ರೊಳಗಿದ್ದು, ಸಾಲದ ಪ್ರಮಾಣ ಜಿಡಿಪಿಯ ಶೇ.24.94ರಷ್ಟಿದೆ. ಮೋದಿಯವ್ರು ಬಂದ ಮೇಲೆ 164 ಲಕ್ಷ ಕೋಟಿ ರೂ. ಸಾಲ ಹೆಚ್ಚಾಗಿದೆ. ನಮ್ಮ ಬಜೆಟ್‌ನಲ್ಲಿ ವಾಸ್ತವವನ್ನು ತಿಳಿಸಲಾಗಿದೆಯೇ ಹೊರತು. ಯಾರನ್ನೂ ದಾರಿ ತಪ್ಪಿಸಿಲ್ಲ. ನಾವು ಆರ್ಥಿಕ ಹೊಣೆಗಾರಿಕೆಯ ಮಾನದಂಡಗಳನ್ನು ಪಾಲಿಸಿದ್ದೇವೆ. ಜನರಿಗೆ ಸಾಮಾಜಿಕ ನ್ಯಾಯ ನೀಡಿ ಆರ್ಥಿಕ ಶಕ್ತಿ ತುಂಬುವುದು ಮುಖ್ಯ. ಮಹಿಳೆಯರು, ರೈತರು, ಕಾರ್ಮಿಕರು, ಹಿಂದುಳಿದವರಿಗೆ, ದೀನದಲಿತರಿಗೆ ಶಕ್ತಿ ತುಂಬುವುದು ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿ ಆದ್ಮೇಲೆ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ: ಸದನಕ್ಕೆ ಸಿಎಂ ಮಾಹಿತಿ

