ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ (West Bengal) ಕಳೆದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಸಹಜವಾಗಿಯೇ ಪ್ರಬಲ ಆಡಳಿತ ವಿರೋಧಿ ಅಲೆ ಇತ್ತು. ಇದರ ಜೊತೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿನ (SIR) ಮೋಸದಾಟವೂ ಸೇರಿದಂತೆ ಕೇಂದ್ರ ಚುನಾವಣಾ ಆಯೋಗದ ಕೈವಾಡದಿಂದಾಗಿ ಮಮತಾ ಬ್ಯಾನರ್ಜಿಯವರು (Mamata Banerjee) ಸೋತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಗ್ಗೆ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಎಸ್‌ಐಆರ್‌ನಲ್ಲಿ ಅವರ ಪರವಾಗಿದ್ದ ಲಕ್ಷಾಂತರ ಮತದಾರರ ಹೆಸರು ಕೈಬಿಟ್ಟು ಹೋಗಿತ್ತು. ಭಾರತೀಯ ಜನತಾ ಪಕ್ಷ ಸರ್ಕಾರಿ ಯಂತ್ರದ ದುರ್ಬಳಕೆ, ತೋಳ್ಬಲ ಮತ್ತು ಹಣದ ಬಲವನ್ನು ರಾಜರೋಷವಾಗಿ ಬಳಸಿ ಈ ಗೆಲುವನ್ನು ಸಾಧಿಸಿದೆ. ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಗೆಲುವು ನಿಜವಾದ ಅರ್ಥದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸೋಲಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ ಸಾಧನೆ, ಸಿದ್ಧಾಂತಕ್ಕೆ ಜಯ ಸಿಕ್ಕಿದೆ: ಸಿಎಂ ಸಿದ್ದರಾಮಯ್ಯ
ಧಾರ್ಮಿಕವಾಗಿ ಮತಗಳ ಧ್ರುವೀಕರಣದ ಕುತಂತ್ರ ರಾಜಕಾರಣವನ್ನು ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಪ್ರಯೋಗಿಸಿ ಯಶಸ್ಸನ್ನು ಕಂಡಿದೆ. ಪಶ್ಚಿಮ ಬಂಗಾಳದ ಪ್ರಜ್ಞಾವಂತ ಮತದಾರರಿಗೆ ಶೀಘ್ರದಲ್ಲಿ ತಾವು ಮಾಡಿರುವ ತಪ್ಪಿನ ಅರಿವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ.
ತಮಿಳುನಾಡು ಚುನಾವಣೆಯ ಈ ಭಾರಿಯ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ. ಆಡಳಿತ ವಿರೋಧಿ ಅಲೆ ಇದ್ದರೂ ಡಿಎಂಕೆ ಸರ್ಕಾರದ ಜನಪರ ಆಡಳಿತ ಮತ್ತು ಕಾರ್ಯಕ್ರಮಗಳನ್ನು ಅಲ್ಲಿನ ಜನ ಮೆಚ್ಚಿಕೊಂಡಿದ್ದರು. ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಎಂದೂ ಸಹಿಸದ ತಮಿಳು ಮತದಾರರು ಇಂದಿನವರೆಗೆ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಾ ಬಂದವರು. ಹೀಗಿದ್ದೂ ತಮಿಳುನಾಡಿನ ಯುವಜನರು ಮತ್ತು ಮಹಿಳೆಯರಲ್ಲಿ ಸಿನೆಮಾ ನಟ ವಿಜಯ್ ಅವರ ಬಗೆಗಿನ ಆಕರ್ಷಣೆಗೆ ಬಲಿಯಾಗಿರುವುದು ವಿಷಾದನೀಯ.
ಡಿಎಂಕೆ ಪಕ್ಷದ ಸೋಲು ದ್ರಾವಿಡ ಚಳುವಳಿಯ ಉಪಉತ್ಪನ್ನವಾದ ತಮಿಳುನಾಡಿನ ದ್ರಾವಿಡ ರಾಜಕೀಯಕ್ಕೆ ಆಗಿರುವ ಗಂಭೀರ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ಸೋಲಿನಿಂದ ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಇದೇ ವೇಳೆ ಅನಿರೀಕ್ಷಿತವಾಗಿ ಅಭೂತಪೂರ್ವ ಗೆಲುವು ಸಾಧಿಸಿದ ನಟ ವಿಜಯ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ತ.ನಾಡಲ್ಲಿ ವಿಜಯ್ ಗೆಲ್ತಾರೆ ಎಂದಿದ್ದ ನಮ್ಮ ಸಮೀಕ್ಷೆಯನ್ನ ಎಲ್ಲರೂ ಗೇಲಿ ಮಾಡಿದ್ರು: ಆಕ್ಸಿಸ್ ಮೈ ಇಂಡಿಯಾ












