Connect with us

Districts

ರಾಯಚೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಯಿಂದ `ಅಣ್ಣಾ ಕ್ಯಾಂಟೀನ್’: 5 ರೂ. ತಿಂಡಿ, 10 ರೂ. ಊಟ

Published

on

ರಾಯಚೂರು: ತಮಿಳುನಾಡಿನ ಅಮ್ಮಾ ಕ್ಯಾಂಟಿನ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಆದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ರಾಯಚೂರಿನಲ್ಲಿ ಅಣ್ಣಾ ಕ್ಯಾಂಟೀನ್ ತೆಗೆದು ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುತ್ತಿದ್ದಾರೆ.

ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟಿನ್ ಆರಂಭಿಸುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಯಾದ ರಾಯಚೂರಿನ ಮಾನ್ವಿ ಪಟ್ಟಣದ ನಿವಾಸಿ ಎಂ.ಈರಣ್ಣ ಹಾಗೂ ಅವರ ಸ್ನೇಹಿತರು `ಅಣ್ಣಾ ಕ್ಯಾಂಟೀನ್’ ಪ್ರಾಂಭಿಸಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಒದಗಿಸುವ ಮೂಲಕ ಇಡೀ ದೇಶದಲ್ಲೇ ಮನೆ ಮಾತಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹೆಸರಿನ ಅಮ್ಮಾ ಕ್ಯಾಂಟಿನ್ ಮಾದರಿಯ ಪ್ರಯೋಗ ಈಗ ರಾಜ್ಯದಲ್ಲೂ ಆರಂಭವಾಗಲಿದೆ.

5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಶುಚಿ-ರುಚಿಯಾದ ಊಟ ಕೊಡುತ್ತಿದ್ದಾರೆ. ಕ್ಯಾಂಟಿನ್‍ನಲ್ಲಿ ಇಡ್ಲಿ, ಪಲಾವ್, ಪೂರಿ ಸೇರಿದಂತೆ ಒಂದೊಂದು ದಿನ ಒಂದೊಂದು ತಿಂಡಿ ಸಿಗುತ್ತೆ. ಅನ್ನ ಸಾಂಬರ್, ಚಿತ್ರಾನ್ನ, ಮಿರ್ಚಿ ಊಟ ಕಡಿಮೆ ದುಡ್ಡಿನಲ್ಲಿ ರೈತರ ಹೊಟ್ಟೆ ತುಂಬಿಸುತ್ತಿದೆ. ಕ್ಯಾಂಟಿನ್‍ನಲ್ಲಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ತಿಂಡಿ ಸಿಗುತ್ತದೆ. ಮಧ್ಯಾಹ್ನ 1 ರಿಂದ 4 ಗಂಟೆವರೆಗೆ ಊಟ ಸಿಗುತ್ತದೆ.

ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಎಂ.ಈರಣ್ಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಸತತ ಎರಡು ವರ್ಷಗಳಿಂದ ರಾಯಚೂರಿನಲ್ಲಿ ಭೀಕರ ಬರಗಾಲ ಎದುರಾಗಿದ್ದು, ರೈತರು ಗುಳೆ ಹೋಗುವುದು ನಿಂತಿಲ್ಲ. ಹೀಗಾಗಿ ಮಾನ್ವಿಯ ಟಿಎಪಿಎಂಸಿ ಆವರಣದಲ್ಲಿ ಮುಖ್ಯವಾಗಿ ರೈತರಿಗಾಗಿ ಈರಣ್ಣ ಅವರು ತಮ್ಮ ನಾಲ್ಕೈದು ಜನ ಸ್ನೇಹಿತರೊಂದಿಗೆ ಅಣ್ಣಾ ಕ್ಯಾಂಟಿನ್ ತೆರೆದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿದ್ರೂ ರಾಜಕೀಯ ಬೇರೆ, ಜನಸೇವೆ ಬೇರೆ. ಜನರ ಕಷ್ಟಕ್ಕೆ ಸ್ಪಂದಿಸಲು ಕ್ಯಾಂಟಿನ್ ತೆರೆದಿದ್ದೇವೆ ಎಂದು ಈರಣ್ಣ ಹೇಳುತ್ತಾರೆ.

ಈಗಾಗಲೇ ಮಾನ್ವಿ, ಸಿರವಾರ, ಕಲ್ಲೂರು, ಪೋತ್ನಾಳ ಸೇರಿದಂತೆ ವಿವಿಧೆಡೆ ಕುಡಿಯುವ ನೀರಿನ ಅರವಟಿಗೆಗಳನ್ನ ತೆರೆದಿರುವ ಸಿದ್ದರಾಮಯ್ಯ ಅಭಿಮಾನಿಗಳು, ಮೊದಲ ಬಾರಿಗೆ ಅಣ್ಣಾ ಕ್ಯಾಂಟಿನ್ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಅಗಸ್ಟ್ 15ಕ್ಕೆ ಇಂದಿರಾ ಕ್ಯಾಂಟಿನ್ ಆರಂಭಿಸುವ ಮುನ್ನವೇ ರಾಯಚೂರಿನ ಮಾನ್ವಿಯಲ್ಲಿ ಅಣ್ಣಾ ಕ್ಯಾಂಟಿನ್ ಹೆಸರು ಮಾಡುತ್ತಿದೆ.

 

Click to comment

Leave a Reply

Your email address will not be published. Required fields are marked *