ಶ್ರೀನಗರ: ಜಮ್ಮು-ಕಾಶ್ಮೀರ(Jammu – Kashmir)ದ ರಿಯಾಸಿ ಜಿಲ್ಲೆಯಲ್ಲಿ ಮೇಘ ಸ್ಫೋಟ (Cloudburst) ಸಂಭವಿಸಿ ಹಠಾತ್ ಜಲಪ್ರವಾಹ(Flood) ಉಂಟಾಗಿದೆ. ಘಟನೆಯಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ರಿಯಾಸಿ ಜಿಲ್ಲೆಯ ಮಹೋರ್ ಉಪವಿಭಾಗದ ಬಥೋಯಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಮೇಘ ಸ್ಫೋಟ ಸಂಭವಿಸಿದೆ. ಭಾರೀ ಮಳೆಯೊಂದಿಗೆ ನೀರು ಏಕಾಏಕಿ ಗ್ರಾಮಕ್ಕೆ ನುಗ್ಗಿ ಹಲವು ಮನೆಗಳಿಗೆ ಹಾನಿ ಉಂಟಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದ ಜಾಮ್ಲಾನ್ ಸೇತುವೆ ಸಮೀಪ ನೀರಿನ ಮಟ್ಟ ಏರಿಕೆಯಾಗಿದ್ದು, ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ: ಗರ್ಲ್‌ಫ್ರೆಂಡ್ಸ್‌ಗೆ ಐಫೋನ್ ಗಿಫ್ಟ್ ಕೊಡಿಸಲು 6.5 ಲಕ್ಷ ಮೌಲ್ಯದ ಐಷಾರಾಮಿ ನಲ್ಲಿಗಳನ್ನು ಕದ್ದ ಅಪ್ರಾಪ್ತರು
ಕಳೆದ ಮೂರು ದಿನಗಳಲ್ಲಿ ಜಮ್ಮು-ಪ್ರದೇಶದ ರಿಯಾಸಿ, ದೋಡಾ, ಕಿಶ್ತ್ವಾರ್ ಹಾಗೂ ಪೂಂಚ್ ಜಿಲ್ಲೆಗಳಲ್ಲಿ ಒಟ್ಟು ಐದು ಮೇಘ ಸ್ಫೋಟ ಪ್ರಕರಣಗಳು ವರದಿಯಾಗಿವೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದು, ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ದಾಳಿಗೆ 3 ಸಾವು, ಮನೆಗಳಿಗೆ ಬೆಂಕಿ
