ನಾಗ್ಪುರ: ಗೆಳತಿಯರಿಗೆ ಐಫೋನ್ (iPhone)ಗಿಫ್ಟ್ ಕೊಡಿಸುವ ಆಸೆಯಿಂದ ಅಪ್ರಾಪ್ತರಿಬ್ಬರು 6.5 ಲಕ್ಷ ಮೌಲ್ಯದ ಐಷಾರಾಮಿ ನಲ್ಲಿಗಳನ್ನು ಕಳವು ಮಾಡಿದ ಘಟನೆ ಮಹಾರಾಷ್ಟ್ರ(Maharashtra)ದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ಕದ್ದ ನಲ್ಲಿಗಳನ್ನು ಕೇವಲ 20 ಸಾವಿರ ರೂ.ಗೆ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳು ನಗರದ ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಟೈಲ್ಸ್ ಹಾಗೂ ಸ್ಯಾನಿಟರಿ ವೇರ್ ಅಂಗಡಿಯಲ್ಲಿ ಕಳ್ಳತನ ನಡೆಸಿದ್ದಾರೆ. ಮೇ 27ರ ಮಧ್ಯರಾತ್ರಿ ಅಂಗಡಿಯ ಮೇಲ್ಛಾವಣಿಯ ತಗಡಿನ ಶೀಟ್‌ಗಳನ್ನು ತೆಗೆದು ಒಳನುಗ್ಗಿದ ಅವರು, ದುಬಾರಿ ಬೆಲೆಯ ನಲ್ಲಿಗಳನ್ನು ಕದ್ದೊಯ್ದಿದ್ದಾರೆ. ಕಳವಾದ ವಸ್ತುಗಳಲ್ಲಿ ಸುಮಾರು 4 ಲಕ್ಷ ಮೌಲ್ಯದ ಚಿನ್ನದ ವಿನ್ಯಾಸದ ಐದು ನಲ್ಲಿಗಳು ಸೇರಿದಂತೆ ರೋಸ್ ಗೋಲ್ಡ್ ಮತ್ತು ಸಿಲ್ವರ್ ಬಣ್ಣದ ಐಷಾರಾಮಿ ನಲ್ಲಿಗಳೂ ಸೇರಿದ್ದವು. ಇದನ್ನೂ ಓದಿ:ಅಂತರರಾಜ್ಯ ಜಲ ಭದ್ರತೆ, ರಾಯಚೂರು-ಯಾದಗಿರಿ ಅಭಿವೃದ್ಧಿಗೆ ಸಹಕಾರ – ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭರವಸೆ: ಬೋಸರಾಜು
ಅಂಗಡಿ ಮಾಲೀಕ ರಾಹುಲ್ ಜಯಚಂದ್ ಬಾತ್ರಾ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದು, ಕೇವಲ 12 ಗಂಟೆಗಳಲ್ಲೇ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಅಪ್ರಾಪ್ತರು ತಮ್ಮ ಗೆಳತಿಯರಿಗೆ ಐಫೋನ್ ಖರೀದಿಸಲು ಹಣ ಬೇಕಾಗಿದ್ದ ಕಾರಣ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ನಲ್ಲಿಗಳನ್ನು ಸ್ಥಳೀಯ ಗುಜರಿ ವ್ಯಾಪಾರಿ ಇರ್ಫಾನ್ (25)ಗೆ ಕೇವಲ 20 ಸಾವಿರಕ್ಕೆ ಮಾರಾಟ ಮಾಡಿರುವುದಾಗಿಯೂ ತಿಳಿಸಿದ್ದಾರೆ. ಪೊಲೀಸರು ಅಪ್ರಾಪ್ತರು ಹಾಗೂ ಗುಜರಿ ವ್ಯಾಪಾರಿ ಇರ್ಫಾನ್ ಅವರನ್ನು ಬಂಧಿಸಿದ್ದು, ಕಳವಾದ ನಲ್ಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಲಾಮ್ನಾ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ರಾಮ್ಲೋಡ್ ತಿಳಿಸಿದ್ದಾರೆ.ಇದನ್ನೂ ಓದಿ:ದೆಹಲಿ ರೆಸ್ಟೋರೆಂಟ್ ದುರಂತ – 2025ರಲ್ಲೂ ಜೈಲು ಸೇರಿದ್ದ ಹೋಟೆಲ್ ಮಾಲೀಕ
