Connect with us

Chikkamagaluru

ಸುದೀಪ್ ವಿರುದ್ಧದ ಕೇಸ್ ವಜಾ

Published

on

ಚಿಕ್ಕಮಗಳೂರು: ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ ಮೇಲಿನ ವಿವಾದ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.

ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ಎಂಬವರು ನಟ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿ ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಿಂದೆ ವಾರಸ್ದಾರ ಧಾರಾವಾಹಿ ತಂಡ ನಮ್ಮ ಮನೆಯಲ್ಲಿ ಶೂಟಿಂಗ್ ನಡೆಸುವ ವೇಳೆಯಲ್ಲಿ ನನಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೀಪಕ್ ಮಯೂರ್ ಪಟೇಲ್ ಆರೋಪಿಸಿದ್ದರು.

ಈ ಸಂಬಂಧ ಚಿಕ್ಕಮಗಳೂರು 2ನೇ ಹೆಚ್ಚುವರಿ ನ್ಯಾಯಾಲಯ ಸುದೀಪ್‍ಗೆ ವಾರೆಂಟ್ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ನಟ ಸುದೀಪ್ ಪರ ವಕೀಲ ಗೋಪಿನಾಥ್ ಹೈ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಸುದೀಪ್ ಅವರಿಗೆ ಖುಲಾಸೆ ನೀಡಿ ಪ್ರಕರಣವನ್ನು ವಜಾ ಮಾಡಿ ಆದೇಶ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಸುದೀಪ್ ಪರ ವಕೀಲ ಗೋಪಿನಾಥ್, ಸುದೀಪ್ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಲಾಗಿತ್ತು. ಅಲ್ಲದೇ ದೀಪಕ್ ಮಯೂರ್ ಪಟೇಲ್, ಬೇರೆ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಆ ನಷ್ಟವನ್ನು ನಮ್ಮಿಂದ ಭರಿಸಲು ಪ್ರಯತ್ನಿಸಿದರು. ಆದರೆ ಅದು ಸಫಲವಾಗಿಲ್ಲ, ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ಗೋಪಿನಾಥ್, ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.

ಘಟನೆ ವಿವರ:
ಖಾಸಗಿ ವಾಹಿನಿಯಲ್ಲಿ ನಟ ಸುದೀಪ್ ನಿರ್ಮಾಣದ `ವಾರಸ್ದಾರ’ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಗಾಗಿ ಸುದೀಪ್ ಅವರು ಚಿಕ್ಕಮಗಳೂರಿನ ಕಾಫಿ ಎಸ್ಟೇಟನ್ನು ಬಾಡಿಗೆ ಪಡೆದುಕೊಂಡಿದ್ದರು. ಈ ಎಸ್ಟೇಟ್‍ನ ಮಾಲೀಕರೇ ದೀಪಕ್ ಪಟೇಲ್, ಇವರ ಮನೆ ಮತ್ತು ಜಮೀನನ್ನು ಧಾರಾವಾಹಿಗಾಗಿ ಬಳಕೆ ಮಾಡಿಕೊಂಡಿದ್ದಾರೆ. ಆದರೆ ಬಾಡಿಗೆ ನೀಡದೇ ಸುದೀಪ್ ವಂಚನೆ ಮಾಡಿದ್ದಾರೆ ಎಂದು ಮಾಲೀಕ ಆರೋಪಿಸಿದ್ದರು.

ಅಷ್ಟೇ ಅಲ್ಲದೇ ಧಾರಾವಾಹಿಗಾಗಿ ಸುದೀಪ್ ಬಗೆ ಬಗೆಯ ಗಿಡ ಕಡಿದು ಗೆಸ್ಟ್ ಹೌಸ್ ನಿರ್ಮಾಣ ಮಾಡಿದ್ದರು. ಆದರೆ ವಾರಸ್ದಾರ ತಂಡ ಅರ್ಧದಲ್ಲೇ ಶೂಟಿಂಗ್ ಪ್ಯಾಕಪ್ ಮಾಡಿ ಹೋಗಿದ್ದಾರೆ. ಧಾರಾವಾಹಿ ಶುರು ಮಾಡಿದಾಗ ಮೊದಲು 50 ಸಾವಿರ ಕೊಟ್ಟಿದ್ದರು. ನಂತರ 1 ಲಕ್ಷ 80 ರೂ. ಸಾವಿರ ಕೊಟ್ಟಿದ್ದಾರೆ. ಆದರೆ ಈಗ ಧಾರಾವಾಹಿ ನಿಂತು 7 ತಿಂಗಳಾಗಿದೆ. ಈಗ ಇದರಿಂದ ಚಿತ್ರ ತಂಡ ಸುಮಾರು 90 ಲಕ್ಷ ರೂ. ಮೌಲ್ಯದ ನಷ್ಟ ಮಾಡಿದೆ ಎಂದು ಆರೋಪಿಸಿದ್ದ ದೀಪಕ್ ಫಿಲ್ಮ್ ಚೇಂಬರಿಗೆ ದೂರು ಸಹ ನೀಡಿದ್ದರು.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಅಂದು ಮಾತನಾಡಿದ ಮಾಲೀಕ ದೀಪಕ್, ಗೆಸ್ಟ್ ಹೌಸ್ ನಿರ್ಮಾಣಕ್ಕಾಗಿ ನನ್ನ ಕಾಫಿ ತೋಟವನ್ನು ನಾಶ ಮಾಡಿದ್ದಾರೆ. ನಾನು ಸಾಲ ಮಾಡಿ ಎಲ್ಲವನ್ನು ರೆಡಿ ಮಾಡಿಸಿದ್ದೇನೆ. ಈಗ ನಮಗೆ ಬರೋಬ್ಬರಿ 1 ಕೋಟಿ ರೂ. ಮೇಲೆ ಅಧಿಕವಾಗಿ ನಷ್ಟವಾಗಿದೆ. ನಾನು ಸುದೀಪ್ ಅಭಿಮಾನಿ ಅವರ ಮನವಿ ಮಾಡಿಕೊಂಡಿದ್ದಕ್ಕೆ ಜಾಗ ಬಿಟ್ಟುಕೊಟ್ಟಿದೆ. ಆದರೆ ಸರಿಯಾಗಿ ಟಿ.ಆರ್.ಪಿ ಬಂದಿಲ್ಲ ಎಂದು ಬಾಡಿಗೆಯನ್ನು ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

Click to comment

Leave a Reply

Your email address will not be published. Required fields are marked *

www.publictv.in