– ಎಸ್‌ಐಟಿಯಿಂದ ಚಾರ್ಜ್‌ಶೀಟ್ ಸಲ್ಲಿಕೆ
ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ (Bit Coin Scam) ಸಂಬಂಧಿಸಿದಂತೆ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್‌ಗೆ(Mohammed Nalapad) ಕಾನೂನಿನ ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ. ಈ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸದ್ಯ ನ್ಯಾಯಾಲಯಕ್ಕೆ ಅಧಿಕೃತವಾಗಿ ಆರೋಪಪಟ್ಟಿ(Chargesheet) ಸಲ್ಲಿಕೆ ಮಾಡಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರೆ, ಇನ್ನೊಂದೆಡೆ ಜಾರಿ ನಿರ್ದೇಶನಾಲಯ (ED) ಅಕ್ರಮ ಹಣ ವರ್ಗಾವಣೆ ಆರೋಪದಡಿ ತನಿಖೆಯನ್ನು ತೀವ್ರಗೊಳಿಸಿದೆ. ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳು ನಲಪಾಡ್ ಮನೆ ಮೇಲೆ ದಾಳಿ ನಡೆಸಿದ್ದರು, ಇದರ ಬೆನ್ನಲ್ಲೇ ಈಗ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
ಪ್ರಮುಖ ಆರೋಪಿಗಳಾದ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಮೊಹಮ್ಮದ್ ನಲಪಾಡ್ ಸೇರಿದಂತೆ ಇತರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಬಿಟ್‌ಕಾಯಿನ್ ಹಗರಣದ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮೊಹಮ್ಮದ್ ನಲಪಾಡ್ ವಿರುದ್ಧ ಗಂಭೀರ ಅಂಶಗಳನ್ನು ಉಲ್ಲೇಖಿಸಿದ್ದಾರೆ. ತುಮಕೂರಿನ ಖಾಸಗಿ ಕಂಪನಿಯೊಂದರ ಬಿಟ್‌ಕಾಯಿನ್ ಕಳವು ಕೃತ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ನಲಪಾಡ್‌ಗೆ ದೊಡ್ಡ ಮೊತ್ತದ ಪಾಲು ಸಿಕ್ಕಿದೆ.
ಹ್ಯಾಕರ್ ಶ್ರೀಕಿ ಕಳುವು ಮಾಡಿದ್ದ ಬಿಟ್‌ಕಾಯಿನ್‌ಗಳನ್ನು ನಗದೀಕರಣ (ಕ್ಯಾಶ್) ಮಾಡಿಕೊಳ್ಳಲು ಮೊಹಮ್ಮದ್ ನಲಪಾಡ್ ಅವರನ್ನು ಸಂಪರ್ಕ ಮಾಡಿದ್ದ. ನಲಪಾಡ್ ತನ್ನ ಸ್ನೇಹಿತರ ಮುಖಾಂತರ ಈ ಬಿಟ್‌ಕಾಯಿನ್‌ಗಳನ್ನು ನಗದೀಕರಣ ಮಾಡಿಕೊಟ್ಟಿದ್ದರು ಎನ್ನುವ ವಿಚಾರವನ್ನು ಉಲ್ಲೇಖಿಸಲಾಗಿದೆ.
ಆರೋಪಿ ಶ್ರೀಕಿಗೆ ಸಹಾಯ ಮಾಡಲು ನಲಪಾಡ್ ತನ್ನ ಮುಂಬೈ ಮೂಲದ ಸ್ನೇಹಿತನ ನೆರವು ಪಡೆದಿದ್ದರು. ಮುಂಬೈ ಸ್ನೇಹಿತನ ಮೂಲಕ ಹವಾಲಾ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ನಗದೀಕರಣ ಮಾಡಲಾಗಿತ್ತು. ಈ ಇಡೀ ಪ್ರಕ್ರಿಯೆಯಲ್ಲಿ ನಡೆದ ಹಣದ ವಹಿವಾಟಿನ ಕಮಿಷನ್‌ನಲ್ಲಿ ನಲಪಾಡ್‌ಗೂ ಸಹ ದೊಡ್ಡ ಮಟ್ಟದ ಪಾಲು ಹೋಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಚಾರ್ಜ್‌ಶೀಟ್‌ನಲ್ಲಿ ನಲಪಾಡ್‌ಗೆ ಹಣ ಸಂದಾಯವಾಗಿರುವ ಸಂಪೂರ್ಣ ವಿವರಗಳನ್ನು ಎಸ್‌ಐಟಿ ಉಲ್ಲೇಖಿಸಿದೆ.
ಮೂರನೇ ನೋಟಿಸ್
ಇದೇ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳು ಮೊಹಮ್ಮದ್ ನಲಪಾಡ್ ಹಾಗೂ ಹ್ಯಾಕರ್ ಶ್ರೀಕಿ ಸೇರಿದಂತೆ ಹಲವರ ಮನೆಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಇಡಿ ಅಧಿಕಾರಿಗಳು ಶ್ರೀಕಿ ಮತ್ತು ರಾಬಿನ್ ಖಂಡೇವಾಲನನ್ನು ಬಂಧಿಸಿ, ತಮ್ಮ ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದರು.
ಬಂಧಿತ ಆರೋಪಿಗಳು ನೀಡಿದ ಮಹತ್ವದ ಹೇಳಿಕೆಗಳ ಆಧಾರದ ಮೇಲೆ, ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಈಗಾಗಲೇ ಮೊಹಮ್ಮದ್ ನಲಪಾಡ್‌ಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರು. ಆದರೆ ಈಗ ಇಡಿ ಅಧಿಕಾರಿಗಳು ನಲಪಾಡ್‌ಗೆ ಮೂರನೇ ಬಾರಿಗೆ ನೋಟಿಸ್ ನೀಡಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ.
