DistrictsKarnatakaLatestMain Post

ಗೌರಿಗದ್ದೆಗೆ ಒಬ್ಬನೇ ಹೋಗಿದ್ದ ಚಂದ್ರಶೇಖರ್ – ತಮ್ಮನ ಮಗನನ್ನು ನೆನದು ರೇಣುಕಾಚಾರ್ಯ ಕಣ್ಣೀರು

-ಚುನಾವಣೆ ಸೋತಾಗಲೂ ನಾನು ಇಷ್ಟು ಯೋಚನೆ ಮಾಡಿರಲಿಲ್ಲ

ದಾವಣಗೆರೆ: ಶಿವಮೊಗ್ಗದ (Shivamogga) ಗೌರಿಗದ್ದೆಗೆ ಚಂದ್ರಶೇಖರ್ (Chandrasekhar) ಹೋಗಿದ್ದನು. ಅಂದು ರಾತ್ರಿಯಿಂದಲೇ ಅವನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೊನ್ನಾಳಿ (Honnali) ಕ್ಷೇತ್ರದ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ (MP Renukacharya) ತಮ್ಮ ಸಹೋದರನ ಮಗ ನಾಪತ್ತೆಯಾಗಿರುವುದನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ಚಂದ್ರಶೇಖರ್ ಎಲ್ಲಿ ಹೋಗಿದ್ದಾನೆ, ಎಲ್ಲಿ ಇದ್ದಾನೆ ಎನ್ನುವುದು ಕೂಡ ತಿಳಿಯುತ್ತಿಲ್ಲ. ಯಾವಾಗಲೂ ಸ್ನೇಹಿತರ ಜೊತೆ ಇರುತ್ತಿದ್ದ, ಆದರೆ ಕಳೆದ ಭಾನುವಾರ ಒಬ್ಬನೇ ಗೌರಿಗದ್ದೆಗೆ (Gourigadde) ಹೋಗಿದ್ದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

ಬೆಳಗ್ಗೆಯಿಂದಲೂ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಎಲ್ಲರಿಗೂ ಕರೆ ಮಾಡಿ ವಿಚಾರಿಸುತ್ತಿದ್ದೇವೆ. ಯಾವುದೇ ಮಾಹಿತಿಯಾಗಲಿ, ಕಾರು ಕೂಡ ಸಿಗುತ್ತಿಲ್ಲ. ಮನಸ್ಸು ಎಷ್ಟೇ ಭಾರವಾಗಿದ್ದರೂ ಎರಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಿದ್ದೇನೆ. ಎಲ್ಲರೂ ಆತ್ಮ ವಿಶ್ವಾಸ ತುಂಬುತ್ತಿದ್ದಾರೆ. ಚುನಾವಣೆ ಸೋತಾಗಲೂ ನಾನು ಇಷ್ಟು ಯೋಚನೆ ಮಾಡಿರಲಿಲ್ಲ. ಚಂದ್ರಶೇಖರ್ ಬಹಳ ಸೌಮ್ಯ ಸ್ವಭಾವದವನು. ಒಂದು ಕೆಟ್ಟ ಪದ ಕೂಡ ಮಾತನಾಡುತ್ತಿರಲಿಲ್ಲ. ಎಲ್ಲರೊಂದಿಗೂ ಅಷ್ಟು ಚೆನ್ನಾಗಿ ಬೆರೆಯುತ್ತಿದ್ದ. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನನ್ನೊಂದಿಗೆ ಇರುತ್ತಿದ್ದ. ಚಂದ್ರು ವಾಪಸ್ ಬರುತ್ತಾನೆ ಎಂದು ಭಗವಂತನನ್ನು ನಂಬಿದ್ದೇನೆ. ಅವನು ಬಂದ ತಕ್ಷಣ ಮುದ್ದಾಡಬೇಕು ಎಂಬ ಆಸೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

 

ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಅವರು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಇತ್ತೀಚಿಗೆ ರೇಣುಕಾಚಾರ್ಯ ಜೊತೆ ಸಕ್ರಿಯವಾಗಿ ಓಡಾಡಿಕೊಂಡಿದ್ದ 27 ವರ್ಷದ ಚಂದ್ರಶೇಖರ್ ಭಾನುವಾರ ಗೌರಿಗದ್ದೆಯಿಂದ ಹೊನ್ನಾಳಿಗೆ ವಾಪಸ್ ಆಗಿದ್ದರು. ಅದೇ ದಿನ ರಾತ್ರಿ 11:30ರ ಸುಮಾರಿಗೆ ಹೊನ್ನಾಳಿಯ ಸಂತೆ ಮೈದಾನದ ಬಳಿ ಚಂದ್ರಶೇಖರ್ ಫೋನ್ ಸ್ವಿಚ್ ಆಫ್ ಆಗಿದೆ.

ಎಲ್ಲಿ ಹುಡುಕಿದರೂ ಕಾಣುತ್ತಿಲ್ಲ. ಅವರ ಕಾರು ಕೂಡ ಎಲ್ಲಿಯೂ ಪತ್ತೆ ಆಗಿಲ್ಲ. ಇದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ರೇಣುಕಾಚಾರ್ಯ ಅವರು ಚಂದ್ರಶೇಖರ ಎಲ್ಲಿದ್ದರೂ ಬಾರಪ್ಪ ಎಂದು ಗೋಳಾಡುತ್ತಿದ್ದಾರೆ. ಹೊನ್ನಾಳಿ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button