ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಗ್ಯಾನೇಶ್ ಕುಮಾರ್ (Gyanesh Kumar) ಅವರಿಗಿದ್ದ ಝಡ್ ಪ್ಲಸ್ (Z+) ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ದೆಹಲಿಯ ಹೊಸ ಮೋತಿ ಬಾಗ್ ಕಾಲೋನಿಯಲ್ಲಿರುವ ಗ್ಯಾನೇಶ್ ಕುಮಾರ್ ಅವರ ನಿವಾಸ, ಚುನಾವಣಾ ಆಯೋಗದ ಕಚೇರಿ ಹಾಗೂ ಅವರ ವೈಯಕ್ತಿಕ ಭದ್ರತಾ ವ್ಯವಸ್ಥೆಯ ಭಾಗವಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಹೆಚ್ಚುವರಿ ಮೀಸಲು ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಪೇದೆಯನ್ನ ತಳ್ಳಿ ರಾಹುಲ್ ಗಾಂಧಿ ಅಪಮಾನಕರ ನಡವಳಿಕೆ: ಬಿಜೆಪಿ ಆರೋಪ
ಈಗಾಗಲೇ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ದೇಶದ ಎರಡನೇ ಅತ್ಯುನ್ನತ ಭದ್ರತಾ ಮಟ್ಟವಾದ ಝಡ್ ಪ್ಲಸ್ ಭದ್ರತಾ ವರ್ಗದ ರಕ್ಷಣೆಯಲ್ಲಿದ್ದಾರೆ. ಸದ್ಯಕ್ಕಿರುವ ಭದ್ರತಾ ವರ್ಗಕ್ಕಿಂತ ಮೇಲ್ದರ್ಜೆಗೆ ಏರಿಸುತ್ತಿಲ್ಲ. ಬದಲಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ:
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ (INDIA) ಒಕ್ಕೂಟವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖಾರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ವಿರೋಧ ಪಕ್ಷದ ನಾಯಕರು ಭಾರತೀಯ ಚುನಾವಣಾ ಆಯೋಗವು (ECI) ಸರ್ಕಾರದ ಕೈಗೊಂಬೆಯಾಗಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ದೆಹಲಿ | ವಿಪಕ್ಷಗಳ ಪ್ರತಿಭಟನೆಯಲ್ಲಿ ಮೋದಿ ಪರ ಘೋಷಣೆ ಕೂಗಿದ ವ್ಯಕ್ತಿ ಮೇಲೆ ಹಲ್ಲೆ

