– ಜಸ್ಟ್ ಮಿಸ್ ಆದ ಲತೀಫ್ ಭಟ್ ಬಲಿಗಾಗಿ ತೀವ್ರ ಶೋಧ
ಶ್ರೀನಗರ: ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕುಲ್ಗಾಮ್ (Kulgam) ಜಿಲ್ಲೆಯ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಚೆಕ್ಪೋಸ್ಟ್ ಮೇಲೆ ದಾಳಿ ನಡೆಸುವ ಮುನ್ನ ದಿನ ಲಷ್ಕರ್-ಎ-ತೈಬಾದ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ದಾಳಿಗಾಗಿ ಸ್ಥಳ ಗರುತಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ (Encounter) ಉಮರ್ ನಿಸಾರ್ ದಾರ್ ಸೋಮವಾರ (ನ.16) ಲಾರೂ (Laroo) ಎಂಬಲ್ಲಿ ಹತನಾಗಿದ್ದಾನೆ. ಎನ್ಕೌಂಟರ್ ವೇಳೆ ತಪ್ಪಿಸಿಕೊಂಡಿರುವ ಲತೀಫ್ ಭಟ್ಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಗುಂಡು ಹಾರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುವ ನರರಾಕ್ಷಸ – CRPF ಚೆಕ್ಪೋಸ್ಟ್ ಮೇಲೆ ಉಗ್ರ ಲತೀಫ್ ಭಟ್ನಿಂದ ದಾಳಿ ಶಂಕೆ
ಈ ಇಬ್ಬರು ಉಗ್ರರ ಚಲನವಲನದ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕ ನಂತರ, ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (SOG) ಕುಲ್ಗಾಮ್ನಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಪಡೆಗಳು ಹತ್ತಿರ ಬರುತ್ತಿರುವುದನ್ನು ಕಂಡ ಉಗ್ರರಿಬ್ಬರೂ, ಸೇಬಿನ ತೋಟದ ಪಕ್ಕದಲ್ಲಿದ್ದ ಎರಡು ಶಾಲೆಗಳ ಕಡೆಗೆ ಓಡಿಹೋಗಿದ್ದರು.
ಭದ್ರತಾ ಪಡೆಗಳು ತಕ್ಷಣ ಆ ಪ್ರದೇಶವನ್ನು ಸುತ್ತುವರೆದಿದ್ದವು. ಬಳಿಕ ಶಾಲಾ ಕಟ್ಟಡಗಳು ಮತ್ತು ಸುತ್ತಮುತ್ತಲಿನ ತೋಟದಲ್ಲಿದ್ದ ಮಕ್ಕಳು ಹಾಗೂ ಸಿಬ್ಬಂದಿಯನ್ನು ಸಂಪೂರ್ಣವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ನಂತರ, ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದವು.
ನ.11 ರಂದು ಉಮರ್ ನಾಪತ್ತೆ ಕೇಸ್ ದಾಖಲಿಸಿದ್ದ ಕುಟುಂಬಸ್ಥರು
ಈ ಗುಂಡಿನ ಚಕಮಕಿಗೂ ಮೊದಲು, ಉಮರ್ ನಿಸಾರ್ ದಾರ್ ನಾಪತ್ತೆಯಾಗಿದ್ದ. ನ.11 ರಂದು (ಅಂದರೆ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ದಾಳಿ ನಡೆದ ದಿನ) ಅವನು ಮನೆಗೆ ಮರಳದಿದ್ದಾಗ, ಅರೆಹ್ (Arreh) ಗ್ರಾಮದಲ್ಲಿದ್ದ ಅವನ ಕುಟುಂಬಸ್ಥರು ಕುಲ್ಗಾಮ್ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಜಿಲ್ಲೆಯಾದ್ಯಂತ ಅಳವಡಿಸಲಾಗಿದ್ದ ವಿವಿಧ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದಾರ್ ಮತ್ತು ಲತೀಫ್ ಭಟ್ ದಾಳಿ ನಡೆಸಲು ವಿವಿಧ ಸ್ಥಳಗಳನ್ನು ಪರಿಶೀಲಿಸುತ್ತಿರುವುದು ಬೆಳಕಿಗೆ ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ನ.10 ರಂದು, ಮಿರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉಮರ್ ಮತ್ತು ಲತೀಫ್ ಭಟ್ ಸಂಚರಿಸಿ, ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಸ್ಥಳಗಳನ್ನು ಗುರುತಿಸುತ್ತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಮರುದಿನ, ಈ ಇಬ್ಬರು ಉಗ್ರರು ತಮ್ಮ ಯೋಜನೆಯಂತೆ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ಗುಂಡಿನ ದಾಳಿ ನಡೆಸಿ, ನಂತರ ಅಲ್ಲಿಂದ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.
ಉಗ್ರರು ಪರಾರಿಯಾಗಲು ಬಳಸಿದ ಮಾರ್ಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ, ದಾಳಿಯ ನಂತರ ಇಬ್ಬರೂ ಒಟ್ಟಿಗೆ ಓಡಿಹೋಗುತ್ತಿರುವುದು ಸೆರೆಯಾಗಿದೆ. ಈ ದೃಶ್ಯಗಳು ಪತ್ತೆಯಾದ ಬಳಿಕ ಕಾಣೆಯಾದ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಉಮರ್ ಉಗ್ರನ ಜೊತೆ ಸಕ್ರಿಯವಾಗಿರುವ ಬಗ್ಗೆ ಖಚಿತಪಡಿಸಿದ್ದರು. ಈತ ಹಿಂದೆ ಕಲ್ಲು ತೂರಾಟ ಪ್ರಕರಣದಲ್ಲೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ಲತೀಫ್ ಬಲಿಗಾಗಿ ಶೋಧ
ನವೆಂಬರ್ 11 ರ ದಾಳಿಯ ನಂತರ ಉಮರ್ ಗ್ರಾಮಕ್ಕೆ ಮರಳುವ ಬದಲು ಟಿಆರ್ಎಫ್ (TRF) ಸಂಘಟನೆಗೆ ಅಧಿಕೃತವಾಗಿ ಸೇರಿಕೊಂಡಿದ್ದ. ನ.16 ರಂದು ನಡೆದ ಎನ್ಕೌಂಟರ್ನಲ್ಲಿ ಆತ ಬಲಿಯಾಗಿದ್ದು, ಆತನ ಶವವನ್ನು ವಶಪಡಿಸಿಕೊಂಡಿದ್ದಾರೆ. ತಪ್ಪಿಸಿಕೊಂಡಿರುವ ಲತೀಫ್ ಭಟ್ನನ್ನು ಬಲಿಪಡೆಯಲು ಯೋಧರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತನಿಖೆಯ ವೇಳೆ ಉಮರ್ ಕಳೆದ ಐದಾರು ತಿಂಗಳುಗಳಿಂದ ಲಷ್ಕರ್-ಎ-ತೈಬಾ (LeT) ಕಮಾಂಡರ್ ಲತೀಫ್ ಭಟ್ಗೆ ಆಶ್ರಯ ಮತ್ತು ನೆರವು ನೀಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: `ನಿಮ್ಮನ್ನು ಸುಮ್ಮನೆ ಬಿಡಲ್ಲʼ – CRPF ಚೆಕ್ಪೋಸ್ಟ್ ಮೇಲೆ ದಾಳಿಗೂ ಮುನ್ನ ಬೆದರಿಕೆ ಹಾಕಿದ್ದ ಬಾಲಕ!
