ಮಡಿಕೇರಿ: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಜೀವನಾಡಿ ಕಾವೇರಿ ನದಿ (Cauvery River) ಸಂಪೂರ್ಣ ಬತ್ತುವ ಹಂತಕ್ಕೆ ತಲುಪಿದೆ. ಇದರಿಂದ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಹೆಚ್ಚಾಗಿದೆ.
ಕೊಡಗು (Kodagu) ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ (Rain) ಪರಿಣಾಮ ಕಾವೇರಿ ಹರಿವು ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮ ಮೈಸೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಮೇಲೆ ಬೀರುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲೇ ತುಂಬಿ ಹರಿಯಬೇಕಿದ್ದ ನದಿ ಈಗ ಕಲ್ಲುಗಳ ನಡುವೆ ಸಣ್ಣ ಹರಿವಿಗೆ ಸೀಮಿತವಾಗಿದೆ. ಕೊಡಗು–ಮೈಸೂರು ಗಡಿಯ ಕೊಪ್ಪ ಸೇತುವೆ ಬಳಿ ನದಿಯ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿದಿದೆ. ಈ ವೇಳೆಗೆಲ್ಲಾ 10 ರಿಂದ 15 ಅಡಿ ನೀರು ಹರಿಯುವ ಪ್ರದೇಶದಲ್ಲಿ ಈಗ ಕೇವಲ ಅರ್ಧದಿಂದ 1 ಅಡಿ ಮಟ್ಟದಲ್ಲಿ ಮಾತ್ರ ನೀರು ಕಾಣಿಸುತ್ತಿದೆ. ಜಲಮಾಪಕದಲ್ಲೂ ನೀರಿನ ಮಟ್ಟ ಶೂನ್ಯಕ್ಕೆ ತಲುಪಿರುವುದು ಪರಿಸ್ಥಿತಿಯ ಗಂಭೀರತೆ ಸೂಚಿಸಿದೆ. ಇದನ್ನೂ ಓದಿ: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ – 10 ಗ್ರಾಂ ಗೆ 5 ಸಾವಿರ ರೂ. ನಷ್ಟು ಇಳಿಕೆ

ರಾಜ್ಯದಲ್ಲಿ ಶೇ.60 ಮಳೆ ಕೊರತೆ ದಾಖಲಾಗಿರುವುದು ಜಲಮೂಲಗಳ ಮೇಲೆ ನೇರ ಪರಿಣಾಮ ಬೀರಿದೆ. ವಿಶೇಷವಾಗಿ ಕಾವೇರಿ ಕೊಳ್ಳ ಪ್ರದೇಶದಲ್ಲಿ ಮಳೆಯ ಅಭಾವದಿಂದ ನದಿ ಹರಿವು ಕುಂಠಿತಗೊಂಡಿದೆ. ಕಾವೇರಿ ನೀರನ್ನ ಅವಲಂಬಿಸಿರುವ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಭೀತಿ ಎದುರಾಗಿದೆ.
ಜೊತೆಗೆ ಕೃಷಿ ಚಟುವಟಿಕೆಗಳಿಗೂ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ. ಕಾವೇರಿ ನದಿಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಹಾಗೂ ಹಾರಂಗಿ ಜಲಾಶಯಗಳಲ್ಲೂ ನೀರಿನ ಸಂಗ್ರಹ ನಿರೀಕ್ಷಿತ ಮಟ್ಟ ತಲುಪದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವಿಜಯೇಂದ್ರ, ಅಶೋಕ್ ಇಬ್ಬರೂ ಅಡ್ಡ ಮತದಾನ ಮಾಡಿಸಿರಬೇಕು: ಎಸ್.ಟಿ. ಸೋಮಶೇಖರ್
