– ಮೈಸೂರಿನ ಪರಂಪರೆಗೆ ಕಂಬಳ ತುರಕ ಬೇಡಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ
ಮೈಸೂರು: ಹಿಂದುಳಿದ ಸಮುದಾಯದ ಮೋದಿ (Narendra Modi) ಪ್ರಧಾನಿ ಆಗಿರೋದು ಕಾಂಗ್ರೆಸ್‌ಗೆ ಸಹಿಸೋಕೆ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿಂದು (Mysuru) ನಡೆದ ಕಾಯಕ ಸಮುದಾಯಗಳ ಸಭೆಯನ್ನುದ್ದೇಶಿಸಿ ಮಾತಮಾಡಿದ ಅವರು, ಕಾಂಗ್ರೆಸ್ ಪರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅತ್ಯಂತ ಹಿಂದುಳಿದ ಸಮುದಾಯದ ಮೋದಿ ಅವರು ಪ್ರಧಾನಿ ಆಗಿರೋದು ಕಾಂಗ್ರೆಸ್ ಸಹಿಸೋಕೆ ಆಗುತ್ತಿಲ್ಲ. ಜಾತಿಯ ಕಾರಣಕ್ಕೆ ಕಾಂಗ್ರೆಸ್ ಮೋದಿ ಅವರನ್ನು ವಿರೋಧಿಸುತ್ತಿದೆ. ರಾಜ್ಯದಲ್ಲಿ ಇರೋದು ನಾಲಾಯಕ್ ಕಾಂಗ್ರೆಸ್ ಸರ್ಕಾರ (Congress Government). ಅಹಿಂದ ವರ್ಗಗಳ ರಕ್ಷಣೆ ಮಾಡಲು ಆಗದ ನರಸತ್ತ ಕಾಂಗ್ರೆಸ್ ಸರಕಾರ ಇದು ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯಿಂದ ರಾಜ್ಯದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದೆ ಎಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರಿಗಾಗಿ ರಾಜ್ಯ ಸರಕಾರ ಶಾಶ್ವತ ವಾಸ ದೃಢೀಕರಣ ಪತ್ರ ಕೊಡುತ್ತಿದೆ. ರಾಜ್ಯ ಸರ್ಕಾರದ ಈ ಕೆಲಸವನ್ನ ಭಗವಂತ ಕೂಡ ಮೆಚ್ಚುವುದಿಲ್ಲ. ಪೌರತ್ವ ದೃಢೀಕೃತ ಮಾಡೋದು ಕೇಂದ್ರ ಸರಕಾರ. ರಾಜ್ಯ ಸರಕಾರ ಅಲ್ಲ. ಕಾಂಗ್ರೆಸ್ ಸರಕಾರವನ್ನ ಬುಡಸಮೇತ ಕಿತ್ತು ಹಾಕುತ್ತೇವೆ ಎಂದು ಶಪಥ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಕಪಟ ನಾಟಕ ಮಾಡುತ್ತಿದೆ. ಬಸವಣ್ಣನವರ ಹೆಸರು ಹೇಳಿಕೊಂಡು, ಕೈಯಲ್ಲಿ ಶಿವಲಿಂಗ ಹಿಡಿದುಕೊಂಡು ಕಾಂಗ್ರೆಸ್ ನಾಟಕ ಮಾಡುತ್ತಿದೆ. ಅಂಬೇಡ್ಕರ್ ಈ ದೇಶದ ಪ್ರಧಾನಿ ಆಗಬೇಕಿತ್ತು. ಕಾಂಗ್ರೆಸ್ ಇದನ್ನು ತಪ್ಪಿಸಿತು, ಕಾಂಗ್ರೆಸ್ ಈಗ ಸಂವಿಧಾನ ಹಿಡಿದುಕೊಂಡು ನಾಟಕ ಮಾಡುತ್ತಿದೆ. ಕಾಂಗ್ರೆಸ್‌ಗೆ ಅಂಬೇಡ್ಕರ್, ಮಹಾತ್ಮ ಗಾಂಧಿ, ದೇವರಾಜ ಅರಸು ಹೇಳುವ ನೈತಿಕತೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಮೈಸೂರಿನ ಪರಂಪರೆಗೆ ಕಂಬಳ ತುರುಕಬೇಡಿ
ಇನ್ನೂ ಮೈಸೂರು ದಸರೆಯಲ್ಲಿ ಕಂಬಳ (Kambala) ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಮೈಸೂರಿನ ಜನರ ಭಾವನೆಗೆ ಬೆಲೆ ಕೊಡಬೇಕು. ಭಂಡತನ ಪ್ರದರ್ಶನ ಮಾಡಬಾರದು. ಮೈಸೂರು ದಸರಾ ವೇಳ ಕಂಬಳ ನಡೆಸುವುದು ಬೇಡ. ಕರಾವಳಿಯಲ್ಲೇ ಕಂಬಳವನ್ನು ಸರ್ಕಾರ ಅದ್ದೂರಿಯಾಗಿ ಮಾಡಲಿ. ಅಲ್ಲಿಯ ಪರಂಪರೆಯನ್ನು ಮೈಸೂರಿನ ಪರಂಪರೆಗೆ ತುರಕ ಬೇಡಿ. ಕಂಬಳಕ್ಕೆ ತನ್ನದೆ ಆದ ಶ್ರೀಮಂತಿಕೆ ಇದೆ. ಅದನ್ನು ಸರ್ಕಾರ ಉಳಿಸಿಕೊಂಡು ಹೋಗಬೇಕು. ಕರಾವಳಿಯಲ್ಲಿ ಕಂಬಳವನ್ನ ಇನ್ನೂ ಆದ್ದೂರಿ ಮಾಡಿ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ವಿಜಯೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
