– ಯುಜಿ ನೀಟ್ ಇಚ್ಛೆ/ಆಯ್ಕೆ ದಾಖಲು ಆರಂಭ
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಫಾರ್ಮಸಿ ಕೋರ್ಸ್ ಗಳ ಪ್ರವೇಶಕ್ಕೆ ಇಚ್ಛೆ/ಆಯ್ಕೆಗಳನ್ನು (ಆಪ್ಷನ್ಸ್) ದಾಖಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದಿನಿಂದ (ಆ.7) ಆರಂಭಿಸಿದೆ.
ಎಂಜಿನಿಯರಿಂಗ್ ಇತ್ಯಾದಿ ಸಿಇಟಿ ಕೋರ್ಸ್ ಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಿದ್ದ ಅಭ್ಯರ್ಥಿಗಳು ಕೂಡ ಈಗ ಹೊಸದಾಗಿ ಆಪ್ಷನ್ಸ್ ದಾಖಲಿಸಲು/ಮಾರ್ಪಡಿಸಲು/ತೆಗೆದು ಹಾಕುವುದಕ್ಕೂ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆಗೆ 3 ದಿನಗಳ ಮೊದಲೇ NEET-UG ಪ್ರಶ್ನೆಪತ್ರಿಕೆ ಸೋರಿಕೆ – ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಅಂಶ ಬಹಿರಂಗ
ಆದ್ಯತಾ ಕ್ರಮದಲ್ಲಿ ಆಗಸ್ಟ್ 13ರವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಫಾರ್ಮಸಿ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅದನ್ನು ನೋಡಿಯೇ ಎಚ್ಚರಿಕೆಯಿಂದ ಆಪ್ಷನ್ಸ್ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ವೈದ್ಯಕೀಯ ಕೋರ್ಸ್ ಮೊದಲ ಸುತ್ತಿನ ಮತ್ತು ಎಂಜಿನಿಯರಿಂಗ್ ಇತ್ಯಾದಿ ಸಿಇಟಿ (CET) ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಏಕಕಾಲದಲ್ಲಿ ಮಾಡುತ್ತಿದ್ದು, ತಾತ್ಕಾಲಿಕ ಫಲಿತಾಂಶವನ್ನು ಆ.19ರಂದು ಬೆಳಿಗ್ಗೆ 10 ಗಂಟೆಗೆ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಯುಜಿ ನೀಟ್ (UGNEET) ಕೋರ್ಸ್ ಗಳಿಗೆ ಮೊದಲನೇ ಸುತ್ತಿನ ಸೀಟು ಹಂಚಿಕೆಯಾಗಿರುವ ಕಾರಣ ನಾಲ್ಕು ಚಾಯ್ಸ್ ಗಳು ಇರುತ್ತವೆ. ಆದರೆ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಫಾರ್ಮಸಿ ಇತ್ಯಾದಿ ಯುಜಿಸಿಇಟಿ ಕೋರ್ಸ್ ಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದ ನಂತರ ಚಾಯ್ಸ್ – 1 ಮತ್ತು ಚಾಯ್ಸ್- 4 ಮಾತ್ರ ಆಯ್ಕೆಗೆ ಅವಕಾಶ ಇರುತ್ತದೆ. 3ನೇ ಸುತ್ತಿನ ಸೀಟು ಹಂಚಿಕೆಗೆ ಕೆಲವು ಷರತ್ತುಗಳ ಅನ್ವಯ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಯುಷ್ ಕೋರ್ಸ್ ಗಳಿಗೆ ಸೀಟ್ ಮ್ಯಾಟ್ರಿಕ್ಸ್ ಬಂದಿಲ್ಲ. ಹೀಗಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಿಲ್ಲ ಎಂದು ಅವರು ವಿವರಿಸಿದರು.
ಇದುವರೆಗೂ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಳ್ಳದಿರುವ ಅಭ್ಯರ್ಥಿಗಳು ಶನಿವಾರ ಕೂಡ ಕೆಇಎ ಕಚೇರಿಗೆ ಬಂದ ಮಾಡಿಸಿಕೊಳ್ಳಬಹುದು. ಅದರ ನಂತರವೇ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡು ಆಪ್ಷನ್ಸ್ ದಾಖಲಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಚಾಯ್ಸ್-4 ದಾಖಲಿಸಿ ಪ್ರಕ್ರಿಯೆಯಿಂದ ಹೊರ ನಡೆದಿರುವ ಹಾಗೂ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಮೇಲೂ ಚಾಯ್ಸ್ ದಾಖಲಿಸದೆ ಸುಮ್ಮನಿರುವ ಅಭ್ಯರ್ಥಿಗಳು ಕೂಡ 750 ರೂ. ಪಾವತಿಸಿ ಪುನಃ ಪ್ರಕ್ರಿಯೆಯೊಳಗೆ ಬರುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ನಂದಿಹಿಲ್ಸ್ ಮಾನ್ಸೂನ್ ಮ್ಯಾರಥಾನ್ – ಆ.9 ರಂದು ನಂದಿಬೆಟ್ಟಕ್ಕೆ ವಾಹನಗಳಿಗೆ ನೋ ಎಂಟ್ರಿ



